ಹಜರತ್ ಖಲೀಲ್ ಉಲ್ಲಾ ಅವರ ಚೌಕಂಡಿಯು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲೂಕಿನಲ್ಲಿ ಇರುವ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ. ಈ ಸಮಾಧಿಯು ಎರಡು ಅಂತಸ್ತಿನ ಅಷ್ಟಭುಜಾಕೃತಿಯಾಗಿದ್ದು, ಒಳಗೆ ಸ್ವತಂತ್ರವಾಗಿ ನಿಂತಿರುವ ಚದರ ಗುಮ್ಮಟಾಕಾರದ ಸಮಾಧಿ ಕೊಠಡಿಯನ್ನು ಹೊಂದಿದೆ, ಇದು ಮೊನಚಾದ ಕಮಾನುಗಳನ್ನು ಹೊಂದಿರುವ ದೊಡ್ಡ ದ್ವಾರದ ಮೂಲಕ ಪ್ರವೇಶಿಸುತ್ತದೆ. ಇದು ಕರ್ನಾಟಕದ ಪ್ರಮುಖ ಐತಿಹಾಸಿಕ ಪ್ರವಾಸೋದ್ಯಮ ತಾಣವಾಗಿದೆ.
ಈ ಸ್ಥಳವು ಬೆಂಗಳೂರಿನಿಂದ 765 ಕಿ.ಮೀ (NH50 ಮೂಲಕ), 678 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 5 ಕಿ.ಮೀ ದೂರದಲ್ಲಿದೆ. ಹಾಗೂ ಬೀದರ್ ರೈಲ್ವೆ ನಿಲ್ದಾಣದಿಂದ 6 ಕಿ.ಮೀ ದೂರದಲ್ಲಿ ಇದೆ.
ಈ ಸಮಾಧಿಯು ಚೌಖಂಡಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ. ಹಜರತ್ ಖಲೀಲ ಉಲ್ಲಾಹನು ಶಹಾ ನಿಮತ ಉಲ್ಲಾಹ ಕಿರಮಾನಿಯ ಪುತ್ರನಾಗಿದ್ದನು. ತನ್ನ ತಂದೆಯ ಮರಣದ ನಂತರ 1431 ರಲ್ಲಿ ಬೀದರ್ ಗೆ ಬಂದನು. ಈ ಸಮಾಧಿಯ ಮುಖ್ಯ ಭಾಗದಲ್ಲಿ 03 ಗೋರಿಗಳವೆ ಹಾಗೂ ಸುತ್ತಲೂ ಹಜರತ್ ಖಲೀಲ ಉಲ್ಲಾಹನ ವಂಶಸ್ಥರು ಹಾಗೂ ಅನುಯಾಯಿಗಳ ಗೋರಿಗಳೂ ಸಹ ಇವೆ.
ಈ ಸಮಾಧಿಯು ಅಸ್ತೂರಿನಲ್ಲಿ ಇರುವ ಬಹಮನಿ ಸುಲ್ತಾನ ಅಲ್ಲಾವುದ್ದೀನ್ ಶಾಹನ ಸಮಾಧಿಯ ವಾಸ್ತುಶೈಲಯನ್ನು ಹೋಲುತ್ತದೆ. ಈ ಎರಡೂ ಸಮಾಧಿಗಳು ಸಮಾನ ಹೋಲಕೆಯ ವಾಸ್ತು ಮತ್ತು ಅಲಂಕರಣವನ್ನು ಹೊಂದಿವೆ. ಅಲ್ಲಾಉದ್ದೀನ್‌ನ ಸಮಾಧಿಯು ಚೌಕಾಕಾರದಲ್ಲದ ಮತ್ತು ಚೌಖಂಡಿಯು ಅಷ್ಟಕೋನಾಕಾರದಲ್ಲದೆ, ಎರಡು ಅಂತಸ್ತುಗಳುಳ್ಳ ಈ ಸಮಾಧಿಯ ಗೋಡೆಗಳು ಶ್ರೀಮಂತಿಕೆಯ ಅಲಂಕಾರಿಕ ಟೈಲ್ಸ್ ಗಳಿಂದ ಅಲಂಕೃತಗೊಂಡಿವೆ. ಇದರ ಕೆಲ ಅವಶೇಷಗಳನ್ನು ಇಲ್ಲಿ ಕಾಣಬಹುದು. ಕಮಾನುಗಳ ಮೇಲ್ಬಾಗದ ಸ್ಟಿಲ್ಟ್ (ತುದಿ)ಗಳು ಪರ್ಶಿಯನ್ ಪ್ರಭಾವವನ್ನು ಹೊಂದಿವೆ, ಇವುಗಳೊಂದಿಗೆ ಈ ಸಮಾಧಿಯು ಕಲಾತ್ಮಕವಾದ ಸ್ಟೂಕೊ (Stucco) ಕಲೆ ಹಾಗೂ ವಿವಿಧ ಲಿಪಿ (ಅಕ್ಷರ) ಶೈಲಿಗಳೊಂದಿಗೆ ಅಲಂಕೃತಗೊಂಡಿದೆ.
ಈ ಸಮಾಧಿಯು ತನ್ನ ಉನ್ನತ ಸ್ಥಾನದ ಜೊತೆಗೆ ಅದರಿನ ಮನಮೋಹಕ ಆಕರ್ಷಗಳಲ್ಲೊಂದಾಗಿದೆ. ಇದರಲ್ಲಿರುವ ಅನೇಕ ವೈಶಿಷ್ಟತೆಗಳಿಂದ ಇದು ಬಹಮನಿ ಕಾಲದ ಒಂದು ಅತ್ಯುತ್ತಮ ಕಟ್ಟಡಗಳಲ್ಲಿ ಒಂದಾಗಿದೆ. ಇದರ ಸುಂದರ ಕಮಾನುಗಳು, ವಿಶಿಷ್ಟ ಕೆತ್ತನೆಯ ಕೆಲಸ, ವಿವಿಧ ಶೈಲಿಯ ಬರವಣಿಗೆ (ಅಕ್ಷರಗಳು) ಹಾಗೂ ಚೀನಿ ಮಣ್ಣಿನ ಟೈಲ್ಸ್ ನ ಉಪಯೋಗ, ಇವೆಲ್ಲವು ಬಹಮನೀಯರ ವಾಸ್ತುಕಲೆಯ ಪ್ರತೀಕಗಳಾಗಿವೆ.





