ಮಡಿವಾಳ ಮಾಚಿದೇವರ ಹೊಂಡವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಪಟ್ಟಣದಲ್ಲಿದೆ. ಈ ಪವಿತ್ರ ಸ್ಥಳವು ಶರಣ ಸಂಪ್ರದಾಯದ ಮಹಾನ್ ಶರಣರಾದ ಮಡಿವಾಳ ಮಾಚಿದೇವರಿಗೆ ಸಮರ್ಪಿತವಾಗಿದೆ.
ಮಡಿವಾಳ ಮಾಚಿದೇವರ ಹೊಂಡದ ದೂರಗಳು
- ಬೆಂಗಳೂರು – 646 ಕಿ.ಮೀ
- ಬೀದರ್ – 78 ಕಿ.ಮೀ
- ಬಸವಕಲ್ಯಾಣ – 4 ಕಿ.ಮೀ
- ಹುಮ್ನಾಬಾದ್ ರೈಲ್ವೆ ನಿಲ್ದಾಣ – 32 ಕಿ.ಮೀ
- ಬೀದರ್ ವಿಮಾನ ನಿಲ್ದಾಣ – 80 ಕಿ.ಮೀ
12ನೇ ಶತಮಾನದಲ್ಲಿ ಸಮಾಜದಲ್ಲಿ ದುರ್ಬಲರ ಶೋಷಣೆ, ಜಾತಿ–ತಾರತಮ್ಯ, ಅಸ್ಪೃಶ್ಯತೆ, ಮೂಢನಂಬಿಕೆಗಳು ಹಾಗೂ ಶಿಕ್ಷಣದ ಅವಕಾಶಗಳ ಕೊರತೆ ಸೇರಿದಂತೆ ಅನೇಕ ಸಾಮಾಜಿಕ ಅಸಮಾನತೆಗಳು ವ್ಯಾಪಕವಾಗಿದ್ದವು. ಈ ಅನ್ಯಾಯಗಳ ವಿರುದ್ಧವಾಗಿ ಶರಣರು “ಸಮಪಾಲು–ಸಮಬಾಳು” ಎಂಬ ತತ್ವದ ಮೂಲಕ ಸಮಾನತೆಯ ಸಮಾಜವನ್ನು ನಿರ್ಮಿಸಲು ಸಾಮಾಜಿಕ ಕ್ರಾಂತಿಯನ್ನು ಪ್ರಾರಂಭಿಸಿದರು.
ಅಂತಹ ಶರಣರಲ್ಲಿ ಮಡಿವಾಳ ಮಾಚಿದೇವರು ಪ್ರಮುಖರಾಗಿದ್ದರು. ಅವರು ತಮ್ಮ ಜೀವನದ ಮೂಲಕ ಶ್ರಮದ ಗೌರವ, ಸಮಾನತೆ ಮತ್ತು ಮಾನವ ಸೇವೆಯ ತತ್ವಗಳನ್ನು ಅಳವಡಿಸಿಕೊಂಡು, ಶರಣ ಚಳವಳಿಯ ಇತಿಹಾಸದಲ್ಲಿ ಪ್ರಕಾಶಮಾನವಾದ ಸ್ಥಾನವನ್ನು ಪಡೆದಿದ್ದಾರೆ. ಮಡಿವಾಳ ಮಾಚಿದೇವರು ಮೂಲತಃ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಗ್ರಾಮದವರು.
ಶ್ರೀ ಅಲ್ಲಮಪ್ರಭು ಅವರ ಗದ್ದಿಗೆ ಮಠದ ಪಕ್ಕದ ಮಾರ್ಗದಿಂದ ಮುಂದೆ ಸಾಗಿದರೆ ಮಡಿವಾಳ ಮಾಚಿದೇವರ ಹೊಂಡವನ್ನು ಕಾಣಬಹುದು. ನಾಲ್ಕು ದಿಕ್ಕುಗಳಿಂದ ನೀರಿನಿಂದ ಆವೃತವಾಗಿರುವ ಈ ಹೊಂಡದ ಮಧ್ಯದಲ್ಲಿ ಮಡಿವಾಳ ಮಾಚಿದೇವರ ಮಂದಿರವಿದೆ. ನೀರಿನ ಮಧ್ಯಭಾಗದಲ್ಲಿ ರಸ್ತೆ ನಿರ್ಮಿಸಲಾಗಿದ್ದು, ಇದರಿಂದ ಮಂದಿರಕ್ಕೆ ಸುಲಭವಾಗಿ ತೆರಳಬಹುದು.
ಹೊಂಡದ ಸುತ್ತಲೂ ದೊಡ್ಡ ಮರಗಳು ಬೆಳೆದಿದ್ದು, ಪಾದಚಾರಿಗಳಿಗಾಗಿ ಸುತ್ತಮುತ್ತಲೂ ರಸ್ತೆ ನಿರ್ಮಿಸಲಾಗಿದೆ. ಹೊಂಡವು ವಿಹಂಗಮ ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸುತ್ತದೆ. ಇಲ್ಲಿ ಉಪಾಹಾರ ಗೃಹ ಹಾಗೂ ಮಕ್ಕಳ ಆಟವಾಡಲು ಅಗತ್ಯ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ.
ಕೆಲವು ಕಾಲಘಟ್ಟಗಳಲ್ಲಿ ದೇವಾಲಯಗಳನ್ನು ಸಂಪೂರ್ಣವಾಗಿ ಪರಿವರ್ತಿಸಲಾಗಿದ್ದರೂ, ಅದರ ಪುರಾತನ ಅವಶೇಷಗಳು ಇಂದಿಗೂ ಉಳಿದುಕೊಂಡಿವೆ. ಅವುಗಳಲ್ಲಿ ಶಿವಲಿಂಗದ ಜೊತೆಗೆ ಮಾನವ ರೂಪದ ಶಿಲ್ಪಗಳು, ಹನುಮಂತನ ಮೂರ್ತಿ ಹಾಗೂ ಅನೇಕ ಶಿಲಾಬಾಲಿಕೆಯರ ಪ್ರತಿಮೆಗಳನ್ನೂ ಕಾಣಬಹುದು.
ಭೇಟಿ ನೀಡಿ



