ಪುರಾತನ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಹೊರಕೆರೆದೇವರಪುರ

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಮಂದಿರವು ಹೊಳಲ್ಕೆರೆ ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲೆಯ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯವು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊರಕೆರೆದೇವರಪುರ ಗ್ರಾಮದಲ್ಲಿ ಇದೆ. ಈ ಗ್ರಾಮವು ಐತಿಹಾಸಿಕ, ಧಾರ್ಮಿಕ ಹಾಗೂ ವಾಣಿಜ್ಯ ಕೇಂದ್ರವಾಗಿದೆ ಮತ್ತು ಗ್ರಾಮದ ಹಿಂದಿನ ಮೂಲ ಹೆಸರು ಹೊರಕೇರಿದೇವರಪುರ.

ಈ ದೇವಾಲಯವು ಬೆಂಗಳೂರು ನಿಂದ 200 ಕಿ.ಮೀ ದೂರದಲ್ಲಿದೆ ಮತ್ತು ಚಿತ್ರದುರ್ಗದಿಂದ 30 ಕಿ.ಮೀ ದೂರದಲ್ಲಿದೆ. ಹಾಗೂ ಹೊಳಲ್ಕೆರೆ ನಗರದಿಂದ 22 ಕಿ.ಮೀ ಮತ್ತು ಹೊಳಲ್ಕೆರೆ ರೈಲ್ವೆ ನಿಲ್ದಾಣದಿಂದ ಕೇವಲ 29 ಕಿ.ಮೀ ದೂರದಲ್ಲಿದೆ.

ಈ ದೇವಾಲಯವು ಹೊರಕೆರೆದೇವರಪುರ ಗ್ರಾಮದ ಮಧ್ಯದಲ್ಲಿ ಇದ್ದು, ದೇವಾಲಯವು ಪೂರ್ವಾಭಿಮುಖವಾಗಿದೆ. ಕ್ರಿಸ್ತಶಕ 17- 18 ನೇ ಶತಮಾನದ ಪಾಳೆಯಗಾರರ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನು ಹೊರಕೆರೆ ರಂಗನಾಥಸ್ವಾಮಿ ದೇವಾಲಯ ಎಂದು ಕರೆಯಲಾಗುತ್ತದೆ. ಶಾಸನಗಳಲ್ಲಿ ಇದನ್ನು ಹೊರಕೆರೆ ರಂಗಧಾಮ ಎಂದು ಕರೆಯಲಾಗಿದೆ. ವಿಶಾಲವಾದ ಪ್ರಾಂಗಣದಲ್ಲಿರುವ ಈ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ, ಸಭಾಮಂಟಪ, ಮಹಾಮಂಟಪ, ಗಾಳಿ ಗೋಪುರ, ಧ್ವಜಸ್ಥಂಭ, ಆವರಣದ ಗೋಡೆ, ಬಲಿಪೀಠ, ಮಹಾದ್ವಾರಗಳನ್ನು ಹೊಂದಿದೆ. ದೇವಾಲಯದ ಮುಂಭಾಗದಲ್ಲಿ ಉಯ್ಯಾಲೆ ಕಂಬ ಮತ್ತು ರಥ ಮಂಟಪಗಳಿವೆ. ದೇವಾಲಯದ ಪ್ರಾಂಗಣದಲ್ಲಿ ಬಲಭಾಗಕ್ಕೆ ಲಕ್ಷ್ಮಿ, ನಂದಿ, ಪಾದ ದೇವರ ಗುಡಿಗಳು ಮತ್ತು ಎಡಭಾಗಕ್ಕೆ ಭೈರವ, ಆಂಜನೇಯನ ಚಿಕ್ಕದಾದ ಗುಡಿಗಳಿವೆ.

ದೇವಾಲಯದ ಎಡಭಾಗದಲ್ಲಿ ತೆಪ್ಪೋತ್ಸವಕ್ಕೆಂದು ನಿರ್ಮಾಣ ಮಾಡಲಾದ ವಿಶಾಲವಾದ ಕೊಳವಿದೆ. ಗರ್ಭಗೃಹದಲ್ಲಿ ಉದ್ಭವ ಮೂರ್ತಿಯೆಂದು ಹೇಳುವ ಸ್ಥಳದಲ್ಲಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಎಂದು ಹೇಳಲಾಗುವ ಕಲ್ಲು ಗುಂಡನ್ನು ಇಟ್ಟು ಪೂಜಿಸಲಾಗುತ್ತದೆ. ಒಡಮೂಡಿರುವ ಹುತ್ತವಿದೆ. ಗರ್ಭಗೃಹದ ಬಾಗಿಲುವಾಡದಲ್ಲಿ ಪೂರ್ಣಕುಂಭಗಳಿವೆ. ಅಂತರಾಳದಲ್ಲಿ ಉತ್ಸವ ಮೂರ್ತಿಗಳನ್ನು ಇಡಲಾಗಿದೆ. ನವರಂಗದಲ್ಲಿ ನಾಲ್ಕು ಕಂಬಗಳಿವೆ. ಇವು ಚಿತ್ರ ಕಾಂಡ ಕಂಬಗಳಾಗಿವೆ. ನವರಂಗದ ಮುಂಭಾಗದಲ್ಲಿ 24 ಕಂಬಗಳ ವಿಶಾಲವಾದ ಸಭಾಮಂಟಪವಿದೆ. ಮಹಾಮಂಟಪದ ಎಡಭಾಗದಲ್ಲಿ ಆಂಜನೇಯನ ಶಿಲ್ಪವಿದೆ.

ದೀಪಸ್ತಂಭವು ಸುಮಾರು 30 ಅಡಿ ಎತ್ತರವಾಗಿದೆ. ಮಹಾದ್ವಾರಗಳನ್ನು ನಾಲ್ಕು ಹಂತಗಳಲ್ಲಿ ಕಟ್ಟಲಾಗಿದೆ. ಇದನ್ನು ಸಂಪೂರ್ಣ ಕಣಶಿಲೆಯನ್ನು ಬಳಸಿ ನಿರ್ಮಿಸಿರುವರು. ಈ ದೇವಾಲಯದ ಪ್ರಮುಖ ಉತ್ಸವ ಫಾಲ್ಗುಣ ಮಾಸದಲ್ಲಿ ಜರುಗುತ್ತದೆ. ಪುಬ್ಬಾ ನಕ್ಷತ್ರದಲ್ಲಿ ಕಲ್ಯಾಣೋತ್ಸವ, ಹೋಳಿ ಹುಣ್ಣಿಮೆಯಂದು ಬೆಳಿಗ್ಗೆ ತೇರು ಹಾಗೂ ಮಧ್ಯಾಹ್ನ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗುತ್ತವೆ.
ವೈಷ್ಣವ ಕ್ಷೇತ್ರವಾದ ಈ ಮಂದಿರದ ಗರ್ಭಗುಡಿಯನ್ನು 1348 ರಲ್ಲಿ ದುಮ್ಮಿಯ ವೀರಪ್ಪ ನಾಯಕ ನಿರ್ಮಿಸಿದ ಬಗ್ಗೆ ಶಾಸನವಿದೆ.

ಇತಿಹಾಸ

ಐತಿಹ್ಯದಂತೆ ಹಿಂದೆ ಇಲ್ಲಿ ನಂದರಾಜ ನೆಂಬುವನು ಆಳ್ವಿಕೆ ಮಾಡುತ್ತಿದ್ದನು. ಆ ನಂದರಾಜನು ತಿರುಪತಿಗೆ ಭಕ್ತರು ನಡೆದುಕೊಂಡು ಹೋಗುತ್ತಿದ್ದಾಗ ಅವರ ಬಳಿ ಇದ್ದ ಹಣ ಕಸಿದುಕೊಂಡು ಚರ್ಮದ ನಾಣ್ಯ ನೀಡಿ ಹಿಂಸಿಸುತ್ತಿದ್ದನಂತೆ. ಇದರಿಂದ ನೊಂದ ಭಕ್ತರು ತಿಮ್ಮಪ್ಪನನ್ನು ಬೇಡಿಕೊಂಡಾಗ ಇಲ್ಲಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಕರೇಕಲ್ಲು ಬೆಟ್ಟದ ಮೇಲೆ ಪಾದ ಊರಿ ಭಸ್ಮ ಮಾಡಿದನಂತೆ. ಊರು ದಹಿಸಲು ಮುಂದಾದಾಗ ತಾಯಿಯೊಬ್ಬಳು ನಂದರಾಜನನ್ನು ಕೊಂದೆ, ನನ್ನ ಮಗುವನ್ನು ಕಾಪಾಡು ಎಂದು ಬೇಡಿದಾಗ ಸ್ವಾಮಿಯು ಶಾಂತನಾಗಿ ಹುತ್ತದಲ್ಲಿ ನೆಲೆಸಿದನಂತೆ.

ಈ ಹುತ್ತಕ್ಕೆ ಮತಿಘಟ್ಟದ ಹಸು ಇಲ್ಲಿಗೆ ಬಂದು ಪ್ರತಿನಿತ್ಯ ಕ್ಷೀರಾಭಿಷೇಕ ಮಾಡುವುದನ್ನು ಕಂಡ ಭಕ್ತರು ಸ್ವಾಮಿಯ ಆದೇಶದಂತೆ ಇಲ್ಲಿ ಒಂದು ಗುಡಿ ಕಟ್ಟಿಸಿದರಂತೆ. ಕೇರಿಯ ಹೊರಭಾಗದಲ್ಲಿ ದೇವರು ನೆಲೆನಿಂತದ್ದರಿಂದ ಇದು ಹೊರಕೇರಿದೇವರಪುರ ವಾಯಿತು .ಕಾಲಾನಂತರ ಜನರ ಬಾಯಲ್ಲಿ ಹೊರಕೆರೆದೇವರಪುರ ವಾಯಿತು. ಪ್ರತಿ 12 ವರ್ಷಕ್ಕೊಮ್ಮೆ ಇಲ್ಲಿ ಗುಂಡಿನ ಸೇವ,ಅನ್ನದ ಕೋಟೆ ಎಂಬ ವಿಶಿಷ್ಟ ಆಚರಣೆ ನಡೆಯುತ್ತದೆ. ಭಕ್ತರು,ಯಾತ್ರಿಕರಿಗೆಸಮುದಾಯ ಭವನ ,ಯಾತ್ರಿನಿವಾಸ ಲಭ್ಯವಿದೆ.

ಭೇಟಿ ನೀಡಿ
ಹೊಳಲ್ಕೆರೆ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಚಿತ್ರದುರ್ಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section