ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಮಂದಿರವು ಹೊಳಲ್ಕೆರೆ ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆದೇವರಪುರ ಗ್ರಾಮದಲ್ಲಿದೆ. ಈ ಗ್ರಾಮವು ಐತಿಹಾಸಿಕ, ಧಾರ್ಮಿಕ ಹಾಗೂ ವಾಣಿಜ್ಯ ಮಹತ್ವವನ್ನು ಹೊಂದಿದ್ದು, ಇದರ ಪ್ರಾಚೀನ ಹೆಸರು ‘ಹೊರಕೇರಿದೇವರಪುರ’ ಎಂದು ತಿಳಿದುಬರುತ್ತದೆ.
ಹೊರಕೆರೆದೇವರಪುರ ಪುರಾತನ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ದೂರಗಳು
- ಬೆಂಗಳೂರು – 200 ಕಿ.ಮೀ
- ಚಿತ್ರದುರ್ಗ – 30 ಕಿ.ಮೀ
- ಹೊಳಲ್ಕೆರೆ – 22 ಕಿ.ಮೀ
- ಹೊಳಲ್ಕೆರೆ ರೈಲ್ವೆ ನಿಲ್ದಾಣ – 28 ಕಿ.ಮೀ
ಈ ದೇವಾಲಯವು ಹೊರಕೆರೆದೇವರಪುರ ಗ್ರಾಮದ ಮಧ್ಯಭಾಗದಲ್ಲಿದ್ದು, ಪೂರ್ವಾಭಿಮುಖವಾಗಿದೆ. ಇದನ್ನು ಕ್ರಿ.ಶ. 17–18ನೇ ಶತಮಾನದ ಪಾಳೆಯಗಾರರ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ‘ಹೊರಕೆರೆ ರಂಗನಾಥಸ್ವಾಮಿ ದೇವಾಲಯ’ ಎಂದೂ ಕರೆಯಲಾಗುತ್ತದೆ. ಶಾಸನಗಳಲ್ಲಿ ಇದನ್ನು ‘ಹೊರಕೆರೆ ರಂಗಧಾಮ’ ಎಂದು ಉಲ್ಲೇಖಿಸಲಾಗಿದೆ.
ವಿಶಾಲವಾದ ಪ್ರಾಂಗಣದಲ್ಲಿ ನಿರ್ಮಿಸಲಾದ ಈ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ, ಸಭಾಮಂಟಪ, ಮಹಾಮಂಟಪ, ಗಾಳಿಗೋಪುರ, ಧ್ವಜಸ್ತಂಭ, ಆವರಣಗೋಡೆ, ಬಲಿಪೀಠ ಹಾಗೂ ಮಹಾದ್ವಾರವನ್ನು ಹೊಂದಿದೆ. ದೇವಾಲಯದ ಮುಂಭಾಗದಲ್ಲಿ ಉಯ್ಯಾಲೆಕಂಬ ಮತ್ತು ರಥಮಂಟಪಗಳಿವೆ. ಪ್ರಾಂಗಣದ ಬಲಭಾಗದಲ್ಲಿ ಲಕ್ಷ್ಮೀ, ನಂದಿ ಹಾಗೂ ಪಾದದೇವರ ಗುಡಿಗಳಿದ್ದು, ಎಡಭಾಗದಲ್ಲಿ ಭೈರವ ಮತ್ತು ಆಂಜನೇಯಸ್ವಾಮಿಯ ಸಣ್ಣ ಗುಡಿಗಳಿವೆ.
ದೇವಾಲಯದ ಎಡಭಾಗದಲ್ಲಿ ತೆಪ್ಪೋತ್ಸವಕ್ಕಾಗಿ ನಿರ್ಮಿಸಲಾದ ವಿಶಾಲವಾದ ಕೊಳವಿದೆ. ಗರ್ಭಗೃಹದಲ್ಲಿ ಉದ್ಭವ ಮೂರ್ತಿಯೆಂದು ಪರಿಗಣಿಸಲ್ಪಡುವ ಸ್ಥಳದಲ್ಲಿ, ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಎಂದು ಭಕ್ತರು ನಂಬುವ ಕಲ್ಲಿನ ಗುಂಡನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಅಲ್ಲಿಯೇ ಒಂದು ಹುತ್ತವೂ ಇದೆ. ಗರ್ಭಗೃಹದ ಬಾಗಿಲಿನ ಚೌಕಟ್ಟಿನಲ್ಲಿ ಪೂರ್ಣಕುಂಭಗಳ ಸುಂದರ ಅಲಂಕಾರವಿದೆ. ಅಂತರಾಳದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ನವರಂಗದಲ್ಲಿ ನಾಲ್ಕು ಚಿತ್ರಕಾಂಡ ಕಂಬಗಳಿದ್ದು, ಅದರ ಮುಂಭಾಗದಲ್ಲಿ 24 ಕಂಬಗಳನ್ನು ಹೊಂದಿರುವ ವಿಶಾಲ ಸಭಾಮಂಟಪವಿದೆ. ಮಹಾಮಂಟಪದ ಎಡಭಾಗದಲ್ಲಿ ಆಂಜನೇಯಸ್ವಾಮಿಯ ಶಿಲ್ಪವಿದೆ.
ದೀಪಸ್ತಂಭವು ಸುಮಾರು 30 ಅಡಿ ಎತ್ತರದಲ್ಲಿದೆ. ಮಹಾದ್ವಾರವನ್ನು ನಾಲ್ಕು ಹಂತಗಳಲ್ಲಿ ನಿರ್ಮಿಸಲಾಗಿದ್ದು, ಸಂಪೂರ್ಣವಾಗಿ ಕಣಶಿಲೆಯನ್ನು ಬಳಸಿ ಕಟ್ಟಲಾಗಿದೆ. ಈ ದೇವಾಲಯದ ಪ್ರಮುಖ ಉತ್ಸವವು ಫಾಲ್ಗುಣ ಮಾಸದಲ್ಲಿ ನಡೆಯುತ್ತದೆ. ಪುಬ್ಬ ನಕ್ಷತ್ರದಂದು ಕಲ್ಯಾಣೋತ್ಸವ, ಹೋಳಿ ಹುಣ್ಣಿಮೆಯಂದು ಬೆಳಿಗ್ಗೆ ತೇರು ಹಾಗೂ ಮಧ್ಯಾಹ್ನ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ.
ವೈಷ್ಣವ ಕ್ಷೇತ್ರವಾಗಿರುವ ಈ ದೇವಾಲಯದ ಗರ್ಭಗುಡಿಯನ್ನು ಕ್ರಿ.ಶ. 1348ರಲ್ಲಿ ದುಮ್ಮಿಯ ವೀರಪ್ಪ ನಾಯಕರು ನಿರ್ಮಿಸಿದರು ಎಂಬುದಕ್ಕೆ ಶಾಸನದ ಆಧಾರ ದೊರೆತಿದೆ.
ಇತಿಹಾಸ
ಐತಿಹ್ಯದ ಪ್ರಕಾರ, ಹಿಂದೆ ಈ ಪ್ರದೇಶವನ್ನು ನಂದರಾಜ ಎಂಬ ದೊರೆ ಆಳುತ್ತಿದ್ದನೆಂದು ಹೇಳಲಾಗುತ್ತದೆ. ತಿರುಪತಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತರ ಬಳಿಯಿದ್ದ ಹಣವನ್ನು ನಂದರಾಜನು ಕಸಿದುಕೊಂಡು, ಅವರಿಗೆ ಚರ್ಮದ ನಾಣ್ಯಗಳನ್ನು ನೀಡಿ ಹಿಂಸಿಸುತ್ತಿದ್ದನೆಂದು ಸ್ಥಳೀಯ ನಂಬಿಕೆಯಿದೆ. ಇದರಿಂದ ನೊಂದ ಭಕ್ತರು ಶ್ರೀ ತಿಮ್ಮಪ್ಪನನ್ನು ಪ್ರಾರ್ಥಿಸಿದಾಗ, ಇಲ್ಲಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಕರೇಕಲ್ಲು ಬೆಟ್ಟದ ಮೇಲೆ ಪಾದವೂರಿ ನಂದರಾಜನನ್ನು ಭಸ್ಮಗೊಳಿಸಿದನೆಂದು ಸ್ಥಳಪುರಾಣ ಹೇಳುತ್ತದೆ.
ಅನಂತರ ಊರನ್ನೇ ದಹಿಸಲು ಮುಂದಾದ ಸಂದರ್ಭದಲ್ಲಿ, ತಾಯಿಯೊಬ್ಬಳು ತನ್ನ ಮಗುವಿನೊಂದಿಗೆ ಸ್ವಾಮಿಯನ್ನು ಪ್ರಾರ್ಥಿಸಿ, “ನಂದರಾಜನನ್ನು ಸಂಹರಿಸಿದ್ದೀರಿ, ಈಗ ನನ್ನ ಮಗುವನ್ನು ಕಾಪಾಡಿ” ಎಂದು ಬೇಡಿಕೊಂಡಳು. ಆಗ ಸ್ವಾಮಿಯು ಶಾಂತನಾಗಿ ಅಲ್ಲಿಯೇ ಹುತ್ತದಲ್ಲಿ ನೆಲೆಸಿದನೆಂದು ನಂಬಲಾಗಿದೆ.
ಈ ಹುತ್ತಕ್ಕೆ ಮತಿಘಟ್ಟದ ಹಸುವೊಂದು ಪ್ರತಿದಿನ ಬಂದು ಸ್ವಯಂ ಕ್ಷೀರಾಭಿಷೇಕ ಮಾಡುತ್ತಿದ್ದುದನ್ನು ಕಂಡ ಭಕ್ತರು, ಸ್ವಾಮಿಯ ಆದೇಶದಂತೆ ಆ ಸ್ಥಳದಲ್ಲಿ ಒಂದು ದೇವಾಲಯವನ್ನು ನಿರ್ಮಿಸಿದರೆಂದು ಹೇಳಲಾಗುತ್ತದೆ. ದೇವರು ಕೇರಿಯ ಹೊರಭಾಗದಲ್ಲಿ ನೆಲೆಸಿದ್ದರಿಂದ ಈ ಸ್ಥಳಕ್ಕೆ ‘ಹೊರಕೇರಿದೇವರಪುರ’ ಎಂಬ ಹೆಸರು ಬಂದಿದೆ. ಕಾಲಕ್ರಮೇಣ ಜನರ ಬಳಕೆಯಲ್ಲಿ ಅದು ‘ಹೊರಕೆರೆದೇವರಪುರ’ ಎಂದು ಪ್ರಸಿದ್ಧಿಯಾಯಿತು.
ಪ್ರತಿ 12 ವರ್ಷಗಳಿಗೊಮ್ಮೆ ಇಲ್ಲಿ ‘ಗುಂಡಿನ ಸೇವೆ’ ಹಾಗೂ ‘ಅನ್ನದ ಕೋಟೆ’ ಎಂಬ ವಿಶಿಷ್ಟ ಧಾರ್ಮಿಕ ಆಚರಣೆಗಳು ವಿಜೃಂಭಣೆಯಿಂದ ನಡೆಯುತ್ತವೆ. ಭಕ್ತರು ಮತ್ತು ಯಾತ್ರಿಕರ ಅನುಕೂಲಕ್ಕಾಗಿ ಸಮುದಾಯ ಭವನ ಹಾಗೂ ಯಾತ್ರಿನಿವಾಸದ ಸೌಲಭ್ಯಗಳನ್ನೂ ಇಲ್ಲಿ ಕಲ್ಪಿಸಲಾಗಿದೆ.
ಭೇಟಿ ನೀಡಿ




