ಶಿಶುನಾಳ ಶರೀಫ್ ಸಾಹೇಬ್ ಸ್ಮಾರಕವು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನ ಹಾಳ ಗ್ರಾಮದಲ್ಲಿ ಇದೆ. ಶಿಶುನಾಳ ಶರೀಫರು ಕನ್ನಡ ಸಾಹಿತ್ಯ ತತ್ವಪದಗಳ ರೂವಾರಿ. ಶಿಶುನಾಳ ಶರೀಫರು ಅನುಭಾವಕಾವ್ಯದ ಹೊಂಗಿರಣವೊಂದನ್ನು ಹಾಯಿಸಿದ ಪ್ರಸಿದ್ಧ ಅನುಭಾವಿ ವರಕವಿ. ಶರೀಫರು ದೈವಭಕ್ತ, ಸಂತ, ಜ್ಞಾನಿ, ಕವಿ, ಸಮಾಜಸುಧಾರಕ, ವಿಚಾರವಾದಿ ಮಾತೃಹೃದಯ, ಕರುಣೆ, ಮೈತ್ರಿ, ಪ್ರೇಮ ಸ್ವಭಾವವುಳ್ಳ ರೂವಾರಿ.
ಈ ಸ್ಮಾರಕವು ಬೆಂಗಳೂರಿನಿಂದ ಸುಮಾರು 383 ಕಿ.ಮೀ ಮತ್ತು ಹುಬ್ಬಳಿಯಿಂದ 46 ಕಿ.ಮೀ ದೂರದಲ್ಲಿದೆ. ಹಾಗೂ ಹಾವೇರಿ ನಗರದಿಂದ 51ಕಿ.ಮೀ ಮತ್ತು ಹಾಗೂ ಗುಡ್ಜೇರಿ ರೈಲ್ವೆ ನಿಲ್ದಾಣದಿಂದ 6 ಕಿ.ಮೀ ದೂರದಲ್ಲಿದೆ.
ಶಿಶುನಾಳ ಶರೀಫ್ ಸಾಹೇಬ್ ಸ್ಮಾರಕ ಅವರ ಬಗ್ಗೆ ಮಾಹಿತಿ
ಶರೀಫರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನ ಹಾಳ ಗ್ರಾಮದಲ್ಲಿ 1819 ಮಾರ್ಚ್ 7 ರಂದು ಜನಿಸಿದರು. ಇವರ ತಂದೆ ದೇವಕಾರ ಮನೆತನದ ಇಮಾಮ ಹಜರತ ಸಾಹೇಬರು ಹಾಗು ತಾಯಿ ಹಜ್ಜೂಮಾ. ಇವರ ಪೂರ್ಣ ಹೆಸರು ಮಹಮ್ಮದ ಶರೀಫ. ವಿದ್ಯಾಭ್ಯಾಸ ಶಿಶುನಾಳ ಗ್ರಾಮ. ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಕೆಲ ಕಾಲ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು.
ಈ ಸಮಯದಲ್ಲಿ ಶರೀಫರಿಗೆ ಕಳಸದ ಗುರು ಗೋವಿಂದಭಟ್ಟರಿಂದ ಅನುಗ್ರಹವಾಯಿತು. ಮಗನು ಕೆಲಸವನ್ನು ಬಿಟ್ಟು ಆಧ್ಯ್ಶಾತ್ಮಚಿಂತನೆಯಲ್ಲಿ ತೊಡಗಿಸಿಕೊಂಡದ್ದರಿಂದ ಶರೀಫರ ತಂದೆ ತಾಯಿ ಅವರಿಗೆ ಕುಂದಗೋಳ ನಾಯಕ ಮನೆತನದ ಫಾತಿಮಾ ಎಂಬ ಕನ್ಯೆಯೊಂದಿಗೆ ಮದುವೆ ಮಾಡಿದರು. ನಂತರ ಇವರಿಗೆ ಒಂದು ಹೆಣ್ಣು ಮಗು ಜನಿಸಿತು. ಆ ಹೆಣ್ಣು ಮಗು ಬಹಳ ಕಾಲ ಬದುಕಲಿಲ್ಲ. ಆ ಮಗುವಿನ ಚಿಂತೆಯಲ್ಲಿ ಫಾತೀಮಾ ಅವರೂ ಕೂಡ ಅನಾರೋಗ್ಯದಿಂದ ತೀರಿಕೊಂಡರು.
ಶರೀಫರಿಗೆ ಜೀವನದಲ್ಲಿ ಬೇಸರವಾದರೂ, ಶರೀಫರು ಆ ಬಳಿಕ ತಮ್ಮ ಜೀವನವನ್ನು ಆಧ್ಯಾತ್ಮಸಾಧನೆಗೆ ಮುಡಿಪಿಟ್ಟರು. ತಾಳ್ಮೆಯಿಂದ ಸಜ್ಜನರ ಹಾಗೂ ವಿದ್ಯಾವಂತರ ಸಹವಾಸದಲ್ಲಿಯೇ ಕಾಲ ಕಳೆಯುತ್ತಾ ಬಂದರು. ತಮಗೆ ಸರಿಯಾಗಿ ಮಾರ್ಗದರ್ಶನ ನೀಡುವಂತಹ ಗುರುವಿಗಾಗಿ ಅವರು ಊರೂರು ಅಲೆದು ಗೋವಿಂದಭಟ್ಟ ಎಂಬ ಗುರುವಿನಲ್ಲಿ ಸರಿಯಾದ ಮಾರ್ಗದರ್ಶನ ದೊರೆಯಿತು. ಯಾವುದೇ ಮತತ ಬಗ್ಗೆ ಮೂಡನಂಬಿಕೆ ಇಲ್ಲದ ಈ ಗುರುಗಳು ಶರೀಫರಿಗೆ ತುಂಬಾ ಮೆಚ್ಚುಗೆಯಾದರು. ಗುರುಶಿಷ್ಯರಿಬ್ಬರೂ ಮಸೀದಿಗಳಿಗೆ, ದೇವಾಲಯಗಳಿಗೆ ಸಂದರ್ಶನಕ್ಕಾಗಿ ಹೊರಟರು. ಶರೀಫರು ಅನೇಕ ಹಾಡುಗಳನ್ನು ರಚಿಸಿ ಹಾಡಿದರು. ಈ ಗುರುಗಳ ಜೊತೆಗೆ ನವಲಗುಂದದ ನಾಗಲಿಂಗಮತಿ ಮತ್ತು ಗರಗದ ಮಡಿವಾಳಪ್ಪ ಹಾಗು ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳು ಎಂಬುವರು ಸಹ ಶರೀಫರ ಮೇಲೆ ಹೆಚ್ಚಿನ ಪರಿಣಾಮ ಬೀರಿದರು. ಶಿಷ್ಯನನ್ನಾಗಿ ಮಾಡಿಕೊಂಡು ಗುರೂಪದೇಶ ನೀಡಿದರು. ಗುರುಗೋವಿಂದಭಟ್ಟರು ಉಪನಿಷತ್ತುಗಳ ಸಾರವನ್ನು ಶರೀಫರಿಗೆ ತಿಳಿಸಿಕೊಟ್ಟರು.
ಶರೀಫರು ಹಾಡಿದ ಪದಗಳು ಧಾರವಾಡ ಜಿಲ್ಲೆಯ ಆಡುಭಾಷೆಯ ಶೈಲಿಯಲ್ಲಿವೆ. ಈ ಪದಗಳಲ್ಲಿ ಕೆಲವು ದೇವತಾಸ್ತುತಿಯ ಪದಗಳಾದರೆ, ಇನ್ನು ಕೆಲವು ಪದಗಳು ತತ್ವಬೋಧನೆಯ ಪದಗಳಾಗಿವೆ. ಹೆಚ್ಚಿನ ಪದಗಳು ಕನ್ನಡದಲ್ಲಿ ಇದ್ದರೂ ಸಹ ಕೆಲವು ಪದಗಳು ಉರ್ದು ಭಾಷೆಯಲ್ಲಿವೆ.
ಹಳ್ಳಿಯ ಬಾಳಿನ ದಿನದಿನದ ಬದುಕಿನಲ್ಲಿ ತಮ್ಮ ಕಣ್ಮನಗಳನ್ನು ಸೆಳೆದ ಒಂದೊಂದು ಸನ್ನಿವೇಶ-ಸಂಗತಿ, ವಸ್ತು-ವ್ಯಕ್ತಿ, ಪಶು-ಪಕ್ಷಿ ಮೊದಲಾದವುಗಳನ್ನೇ ಒಂದು ರೂಪಕವನ್ನಾಗಿಯೋ ಮಾಡಿಕೊಂಡು ಅವುಗಳಲ್ಲಿ ತಮ್ಮ ಅನುಭಾವದ ಬೆಳಗನ್ನು ವರ್ಣಮಯವಾಗಿ ಹೇಳಿದ್ದಾರೆ.
ಶರೀಫರು ತಮ್ಮ ಜೀವಮಾನದುದ್ದಕ್ಕೂ ಬರೆದ ಹಾಡು ಬೋಧ ಒಂದೇ, ಬ್ರಹ್ಮನಾದ ಒಂದೇ ಎಂಬುದು ಅವರ ಬೀಜಮಂತ್ರವಾಗಿದ್ದು, ಸನಾತನ ವೈದಿಕ ಮತ ಎತ್ತಿಹಿಡಿಯುವ ಬ್ರಹ್ಮತತ್ತ್ವ, ತಮ್ಮ ಪರಿಸರದಲ್ಲಿ ಪ್ರಭಾವಕಾರಿಯಾಗಿದ್ದ ವೀರಶೈವ ಮತದ ಲಿಂಗತತ್ತ್ವ ಹಾಗೂ ತಮ್ಮ ಮನೆತನಕ್ಕೆ ಪೂಜ್ಯವಾಗಿದ್ದ ಹುಲಗೂರ ಖಾದರಶಾ ಸಾಧುವಿನ ಸಮಾಧಿತತ್ತ್ವ.
ಶರೀಫರು ಸರ್ವಧರ್ಮ ಸಮನ್ವಯದ ಉಜ್ಜ್ವಲ ಮೂರ್ತಿಯಾಗಿ ಹಿಂದು-ಮುಸ್ಲಿಮ್ ಬಾಂಧವ್ಯದ ಧವಲಕೀರ್ತಿಯಾಗಿ ಉತ್ತರ ಭಾರತದ ಮಹಾತ್ಮ ಕಬೀರರಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಜನಮನದ ಗದ್ದುಗೆ ಏರಿದರು. ಇದಲ್ಲದೆ ತಮ್ಮ ಅಭಿವ್ಯಕ್ತಿಯಲ್ಲಿ ಅಳವಡಿಸಿಕೊಂಡ ಜನಪದ ಭಾಷೆಯ ಸೊಗಡು-ಗತ್ತು, ಗ್ರಾಮೀಣ ಸಂಗೀತದ ಲಯ-ಲಾಸ್ಯಗಳಿಂದಾಗಿಯೂ ಇವರು ಜನಮನವನ್ನು ಸೂರೆಗೊಂಡರು. ಹೀಗೆ ಆಧ್ಯಾತ್ಮಿಕ ಸಾಧನೆಯ ಸಿದ್ಧಿಯನ್ನು ಮುಟ್ಟಿದಮೇಲೆ ತಮ್ಮಲ್ಲಿ ಬಂದವರಿಗೆ ಧರ್ಮನೀತಿ ಬೋಧೆ ಮಾಡಲೆಂದು ಇವರು ತಮ್ಮ ಮನೆ ಹತ್ತಿರದಲ್ಲಿ ಕುಳಿತುಕೊಳ್ಳುತ್ತಿದ್ದ ಕಟ್ಟೆಯೊಂದು ಇಂದಿಗೂ ಇದ್ದು ಬೋಧಪೀಠ ಎಂಬುದಾಗಿ ಪೂಜಿಸಲ್ಪಡುತ್ತದೆ.
ಶರೀಫರು ಕನ್ನಡ ಮಾತ್ರವಲ್ಲದೆ ಉರ್ದು, ಮರಾಠಿ ಭಾಷೆಗಳನ್ನು ಬಲ್ಲವರಾಗಿದ್ದರು. ಶಿಶುನಾಳದಲ್ಲಿಯೇ ವಾಸಿಸುತ್ತಿದ್ದ ಹಿರೇಮಠದ ಶ್ರೀ ಸಿದ್ಧರಾಮಯ್ಯನವರು ಶರಣ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯವನ್ನು ಪಡೆದವರಾಗಿದ್ದರು. ಶರೀಫರ ತತ್ವಪದಗಳು ಯಾವುದಾದರೊಂದು ಸ್ಥಾಪಿತ ಮತಕ್ಕೆ ಗಂಟುಬಿದ್ದವುಗಳಲ್ಲ. ಶರೀಫರದೇ ಒಂದು ಮತವಿದೆ. ಅದು ರಾಮಾಯಣ, ಮಹಾಭಾರತ, ವಚನ, ಕೀರ್ತನೆ, ಪ್ರಭುಲಿಂಗಲೀಲೆ, ಸೂಫೀತತ್ವ ಎಲ್ಲವುಗಳಿಂದ ಕಲಿತಿದೆ.
ಶರೀಫರು ಶಿಶುವಿನಾಳ ಗ್ರಾಮದಲ್ಲಿದ್ದ ಹೊಂದಿದ್ದ 2.20 ಎಕರೆ ಹೊಲವನ್ನು ಹಾಗೂ ಮನೆಯನ್ನು 1888ರ ಆಗಸ್ಟ್ ತಿಂಗಳಿನಲ್ಲಿ 200 ರೂಪಾಯಿಗಳಿಗೆ ಮಾರಿ ಎಲ್ಲದರಿಂದ ಋಣಮುಕ್ತರಾದರು. ಶರೀಫರು ಹಲವು ಪ್ರಕಾರಗಳಲ್ಲಿ ಪದ್ಯಗಳನ್ನು ರಚಿಸಿದರು. ಅವರ ಕಾವ್ಯ ವೈವಿಧ್ಯಮಯವಾದುದು. ಅವರು ತತ್ತ್ವಪದಗಳನ್ನು ಹಾಡಿದರು. ಕಾಲಜ್ಞಾನವನ್ನು ಹೇಳಿ ಜನರನ್ನು ಎಚ್ಚರಿಸಿದರು. ಲಾವಣಿಗಳನ್ನು ಹಾಡಿ ನೀತಿ ಬೋಧೆಯನ್ನು ಹೇಳಿದರು. ಹೋಳೀ ಹಾಡುಗಳ ಮೂಲಕ ಚರಿತ್ರೆಯನ್ನು ವಿವರಿಸಿದರು. ಮಂಗಳಾರತಿ ಪದಗಳನ್ನು ರಚಿಸಿ ಜನತೆಗೂ ದೈವಕ್ಕೂ ಮಂಗಳವನ್ನು ಹೇಳಿದರು. ಶರೀಫರು ಜೀವನದ ನಿತ್ಯಘಟನೆಗಳನ್ನೆ ವಸ್ತುವಾಗಿ ಆರಿಸಿಕೊಂಡು ಅಧ್ಯಾತ್ಮ ನಡೆಯ ಮಾರ್ಗಗಳನ್ನು ನಿರೂಪಿಸಿದರು.
ಶರೀಫರು ಎಚ್ಚರವಿರಲಿ ತಮ್ಮಾ ಎಂದರು. ಜಾತಿ, ಹಣ, ಅಧಿಕಾರ ಕುರಿತ ಎಚ್ಚರ. ಸ್ವಲ್ಪ ತಿಳಿದು ಸಂಸಾರ ಮಾಡಿದರೆ, ಎಚ್ಚರದಿಂದ ಜೀವನದ ವ್ಯಾಪರದಲ್ಲಿ ತೊಡಗಿದರೆ ನಾಲ್ಕು ದಿನ ನೆಮ್ಮದಿಯಾಗಿ ಬಾಳಬಹುದೆಂದರು. ದೇಹವೇ ಮಸೀದಿ, ದೇಗುಲವೆಂದು ನಂಬಿದರು.
ಇಂಥ ದಿವ್ಯ ಸಂದೇಶ ನೀಡುತ್ತ 70 ವರ್ಷಗಳ ಕಾಲ ಬದುಕಿ (1889 ಜುಲೈ 03) ಎಲ್ಲರಿಗೂ ಹೇಳಿ ಕೇಳಿ, ಬಿಡತೇನಿ ದೇಹ ಬಿಡತೇನಿ ಎಂದು ಹಾಡುತ್ತ ವಿದೇಹ ಕೈವಲ್ಯವನ್ನು ಪಡೆದು ಶಿಶುನಾಳಧೀಶನಲ್ಲಿ ಒಂದಾದರು. ಅವರ ದಿವ್ಯ ಸಂದೇಶ ನಮ್ಮೆಲ್ಲರಿಗೆ ದಾರಿದೀಪವಾಗಲಿ. ತುಂಬು ಜೀವನವನ್ನು ನಡೆಸಿದ ಶರೀಫರ ಮರಣದ ತರುವಾಯ ಅವರ ಅಂತ್ಯಕ್ರಿಯೆಯು ಹಿಂದು ಹಾಗು ಮುಸಲ್ಮಾನ ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಶರೀಫರು ರಚಿಸಿದ ಕಾವ್ಯಗಳಲ್ಲಿ ಕೆಲವು:
- ಲೋಕದ ಕಾಳಜಿ
- ಸ್ನೇಹ ಮಾಡಬೇಕಿಂತವಳ
- ಗುಡಿಯ ನೋಡಿರಣ್ಣ ದೇಹದ
- ಅಳಬೇಡ ತಂಗಿ ಅಳಬೇಡ
ಭೇಟಿ ನೀಡಿ




