ಮಾರ್ಕಂಡೇಶ್ವರ ಬೆಟ್ಟ

ಮಾರ್ಕಂಡೇಶ್ವರ ಬೆಟ್ಟವು ಕರ್ನಾಟಕ ರಾಜ್ಯದ ಕೋಲಾರದಲ್ಲಿ ಇರುವ ಪುರಾತನ ಪುಣ್ಯಕ್ಷೇತ್ರವಾಗಿದೆ. ಬೆಟ್ಟದ ಮೇಲೆ ಮಾರ್ಕಂಡೇಶ್ವರ ದೇವಾಲಯವಿದೆ. ಭಕ್ತ ಮಾರ್ಕಂಡೇಯನನ್ನ ಶಿವ ಯಮನ ಪಾಶದಿಂದ ಬಿಡುಗಡೆ ಮಾಡಿದಂತಹ ಪರಮ ಪವಿತ್ರ ಕ್ಷೇತ್ರವಾಗಿದೆ. ಸಮುದ್ರ ಮಟ್ಟದಿಂದ ಈ ಬೆಟ್ಟವು 1400 ಮೀಟರ್ ಎತ್ತರದಲ್ಲಿ ಇದೆ.

ಈ ಬೆಟ್ಟವು ಬೆಂಗಳೂರಿಂದ 65 ಕಿ.ಮೀ ಮತ್ತು ಕೋಲಾರದಿಂದ 17 ಕಿ.ಮೀ ದೂರದಲ್ಲಿದೆ. ಹಾಗೂ ಕೋಲಾರದ ಕನಕನಪಾಳ್ಯ ರೈಲ್ವೆ ನಿಲ್ದಾಣದಿಂದ 18 ಕಿ.ಮೀ ದೂರದಲ್ಲಿದೆ.

ಈ ದೇವಾಲಯದ ನಿರ್ಮಾಣ ಕಾರ್ಯವು 12ನೇ ಶತಮಾನದ ಆರಂಭದಲ್ಲಿ ಪ್ರಾರಂಭವಾಗಿ 16ನೇ ಶತಮಾನದವರೆಗೆ ಮುಂದುವರೆದಿದೆಯೆಂದು ಇತಿಹಾಸದಿಂದ ತಿಳಿದುಬರುತ್ತದೆ. ಈ ದೇವಾಲಯದ ಅಭಿವೃದ್ಧಿಗೆ ಚೋಳರು ಮತ್ತು ವಿಜಯನಗರದ ರಾಜರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, 1970ರ ದಶಕದಲ್ಲಿ ಶ್ರೀ ಪಟೇಲ್ ವೆಂಕಟರಾಮೇಗೌಡರು ಶ್ರಮಪಟ್ಟು ಭಕ್ತರು ಬೆಟ್ಟದ ಮೇಲೆ ಸುಲಭವಾಗಿ ಹತ್ತಬಹುದಾದಂತೆ ಮೆಟ್ಟಿಲುಗಳನ್ನು ನಿರ್ಮಿಸಿ ಸೌಲಭ್ಯ ಒದಗಿಸಿದ್ದಾರೆ.

ಮಾರ್ಕಂಡೇಶ್ವರ ಬೆಟ್ಟದ ದಂತಕಥೆ

ಮಾರ್ಕಂಡೇಯ ಭೃಗು ಋಷಿ ಕುಲದಲ್ಲಿ ಜನಿಸಿದ ಪ್ರಾಚೀನ ಋಷಿ. ಮೃಕಂಡೂ ಋಷಿ ಮತ್ತು ಆತನ ಪತ್ನಿ ಮರುದ್ಮತಿ ಅವರಿಗೆ ಬಹಳ ವರ್ಷಗಳ ಕಾಲ ಮಕ್ಕಳಿರುವುದಿಲ್ಲ. ಮಕ್ಕಳ ಭಾಗ್ಯ ಪಡೆಯಲಿಕ್ಕಾಗಿ ಘೋರ ತಪ್ಪಸ್ಸನ್ನು ಆಚರಿಸುತ್ತಾರೆ. ಇವರ ತಪಸ್ಸಿಗೆ ಮೆಚ್ಚಿದ ಈಶ್ವರ ಪ್ರತ್ಯಕ್ಷನಾಗಿ ಜ್ಞಾನಿಯೂ ದೈವಭಕ್ತನೂ ಆದ ಅಲ್ಪಾಯುಷಿ ಮಗ ಬೇಕೋ ಅಥವಾ ದೀರ್ಘಾಯುಷಿಯಾದ ಲೋಕಕಂಟಕನಾದ ಮಗ ಬೇಕೋ ಎಂದು ಕೇಳಿದಾಗ, ಮೃಕಂಡು ಮಹರ್ಷಿಗಳು ಅಲ್ಪಾಯುಷಿಯಾದರೂ ಪರವಾಗಿಲ್ಲ ಜ್ಞಾನಿಯಾದ ಮಗನೇ ಬೇಕೆನ್ನುತ್ತಾರೆ. ಹೀಗೆ ಅಲ್ಪಾಯುಷಿಯಾಗಿ ಜನಿಸಿದವನೇ ಮಾರ್ಕಂಡೇಯ.

ತಾನು ಅಲ್ಪಾಯುಷಿ ಎಂದು ತಿಳಿದ ಮಾರ್ಕಂಡೇಯ, ತನ್ನ ತಂದೆ, ತಾಯಿಗಳ ಸಂತುಷ್ಟಿಗಾಗಿ ಶಿವನನ್ನು ಕುರಿತು ತಪವನ್ನಾಚರಿಸುತ್ತಾನೆ. ಆತನ ಆಯಸ್ಸು ಮುಗಿದ ದಿನ ಈಗಿನ ವಕ್ಕಲೇರಿಯ ಬೆಟ್ಟದ ಶಿಖರದಲ್ಲಿ ಮಾರ್ಕಂಡೇಯ ಶಿವಪೂಜೆಯಲ್ಲಿದ್ದಾಗ, ಅವನ ಪ್ರಾಣ ಕೊಂಡೊಯ್ಯಲು ಯಮಧರ್ಮ, ಅವನ ಕೊರಳಿಗೆ ಪಾಶ ಹಾಕಿದಾಗ ಮಾರ್ಕಂಡೇಯ ಶಿವಲಿಂಗ ತಬ್ಬಿ ಹಿಡಿಯುತ್ತಾನೆ. ಯಮ ಬಲವಂತ ಮಾಡಿ ಎಳೆದಾಗ, ಲಿಂಗದಿಂದ ಕೋಪವಿಷ್ಟನಾಗಿ ಎದ್ದ ಶಿವ,ತನ್ನ ತ್ರಿಶೂಲದಿಂದ ಯಮನನ್ನೇ ಕೊಲ್ಲಲು ಮುಂದಾಗುತ್ತಾನೆ. ನಂತರ ಶಾಂತನಾಗಿ ಮಾರ್ಕಂಡೇಯನಿಗೆ ಚಿರಂಜೀವಿಯಾಗೆಂದು ವರ ನೀಡುತ್ತಾನೆ.

ಮಾರ್ಕಂಡೇಯನಿಗೆ ಯಮನ ಪಾಶದಿಂದ ವಿಮುಕ್ತಿಗೊಳ್ಳುವ ವರ ನೀಡಿದ ಕಾರಣದಿಂದ ಇದಕ್ಕೆ ‘ ವರಪುರಿ “ ಎಂದು ಹೆಸರು ಬಂತು ಎಂದು ಸ್ಕಾಂದ ಪುರಾಣದಲ್ಲಿ ಉಲ್ಲೇಖವಿದೆ. ಕ್ರಮಕಪುರಿ ಎಂದೂ ಕರೆಸಿಕೊಂಡಿದ್ದ ಈ ಊರು ನಂತರ ವಕ್ಕಲೇರಿಯಾಯಿತು ಎಂದು ಸ್ಥಳೀಯರು ಹೇಳುತ್ತಾರೆ.

ಭೇಟಿ ನೀಡಿ
ಕೋಲಾರ ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಕೋಲಾರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section