ಎಡ್ಮುರಿ ಜಲಪಾತವು ಮೈಸೂರು ನಗರದ ಹೊರವಲಯದಲ್ಲಿ, ಕೆಆರ್‌ಎಸ್ ಮಾರ್ಗದಲ್ಲಿ, ಬಲಮುರಿ ಜಲಪಾತದ ಸಮೀಪದಲ್ಲಿರುವ ಒಂದು ಸುಂದರ ಜಲಪಾತವಾಗಿದೆ. ಈ ಜಲಪಾತವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಮಜ್ಜಿಗೆಪುರ ಗ್ರಾಮದ ವ್ಯಾಪ್ತಿಯಲ್ಲಿ ಇರುವ ಜಲಪಾತವಾಗಿದೆ.
ಈ ಜಲಪಾತವು ಬೆಂಗಳೂರಿನಿಂದ ಸುಮಾರು 151 ಕಿ.ಮೀ, ಮಂಡ್ಯ ನಗರದಿಂದ ಸುಮಾರು 41 ಕಿ.ಮೀ, ಮೈಸೂರು ನಗರದಿಂದ ಸುಮಾರು 17 ಕಿ.ಮೀ, ಮೈಸೂರು ರೈಲ್ವೆ ನಿಲ್ದಾಣವು ಸಮೀಪದ ರೈಲ್ವೆ ನಿಲ್ದಾಣವಾಗಿದ್ದು, ಅಲ್ಲಿಂದ ಈ ಜಲಪಾತಕ್ಕೆ ಸುಮಾರು 15 ಕಿ.ಮೀ ದೂರವಿದೆ. ಹಾಗೂ ಬೃಂದಾವನ ಗಾರ್ಡನ್ನಿಂದ ಕೇವಲ 4.5 ಕಿ.ಮೀ ದೂರದಲ್ಲಿದೆ.
ಕಾವೇರಿ ನದಿಯಿಂದ ನೀರಾವರಿ ಉದ್ದೇಶಕ್ಕಾಗಿ ಕಾಲುವೆಯ ಮೂಲಕ ನೀರನ್ನು ಹರಿಸಲು ಅಡ್ಡಗೋಡೆಯನ್ನು ನಿರ್ಮಿಸಲಾಗಿದೆ. ಈ ಅಡ್ಡಗೋಡೆಯ ಪರಿಣಾಮವಾಗಿ ಇಲ್ಲಿ ಜಲಪಾತದ ರೂಪ ನಿರ್ಮಾಣವಾಗಿದೆ. ನದಿಯ ಹಾದಿಯಲ್ಲಿರುವ ಸುಮಾರು 6 ಅಡಿ ಎತ್ತರದ ಕಡಿದಾದ ಕಲ್ಲಿನ ಇಳಿಜಾರಿನ ಮೇಲೆ ಹರಿಯುವ ನೀರು ಈ ಜಲಪಾತವನ್ನು ರೂಪಿಸಿದೆ. ಬೆಟ್ಟಗಳ ಹಚ್ಚ ಹಸಿರಿನ ಹಿನ್ನೆಲೆ ಮತ್ತು ಹೊಳೆಯುವ ನೀರಿನ ನೋಟದ ನಡುವೆ ಈ ಜಲಪಾತವು ಮನಮೋಹಕ ದೃಶ್ಯವನ್ನು ಒದಗಿಸುತ್ತದೆ.
ವಾರಾಂತ್ಯಗಳಲ್ಲಿ ಅತ್ಯಂತ ಜನಪ್ರಿಯ ವಿಹಾರ ತಾಣಗಳಲ್ಲಿ ಒಂದಾಗಿ ಪರಿಗಣಿಸಲ್ಪಡುವ ಈ ಸ್ಥಳವು ಹೆಚ್ಚು ಬೇಡಿಕೆಯ ಪಿಕ್ನಿಕ್ ತಾಣವಾಗಿದೆ. ಇದು ಈಜು ಹಾಗೂ ಇತರ ನೀರಿನ ಆಟಗಳು ಮತ್ತು ಚಟುವಟಿಕೆಗಳಿಗೆ ಸೂಕ್ತವಾಗಿದೆ. ಜಲಪಾತದ ಸಮೀಪದಲ್ಲಿ ಪುರಾತನವಾದ ಗಣೇಶ ದೇವಸ್ಥಾನವೊಂದೂ ಇದೆ. ಆರಾಮವಾಗಿ ನಡೆದುಹೋಗಲು, ವಿಶ್ರಾಂತಿ ಪಡೆಯಲು ಮತ್ತು ಶಾಂತವಾಗಿ ಕುಳಿತು ಪ್ರಕೃತಿಯ ರಮಣೀಯ ಸೌಂದರ್ಯವನ್ನು ಅನುಭವಿಸಲು ಇದು ಅತ್ಯುತ್ತಮ ಸ್ಥಳವಾಗಿದೆ.
ಎಡ್ಮುರಿ ಜಲಪಾತವನ್ನು ವರ್ಷದ ಯಾವುದೇ ಸಮಯದಲ್ಲೂ ಭೇಟಿ ಮಾಡಬಹುದು. ಆದರೆ ಮಾರ್ಚ್ನಿಂದ ಜುಲೈ ತಿಂಗಳ ನಡುವೆ ಭೇಟಿ ನೀಡುವುದು ಹೆಚ್ಚು ಉತ್ತಮ. ಈ ಅವಧಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ನೀರಿನ ಚಟುವಟಿಕೆಗಳಿಗೆ ಇದು ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.
ಭೇಟಿ ನೀಡಿ





