ಪಾವಗಡ ಕೋಟೆಯು ಕರ್ನಾಟಕದ ಇತಿಹಾಸದಲ್ಲಿ ತನ್ನದೇ ಆದ ಸುವರ್ಣ ಅಧ್ಯಾಯವನ್ನು ಹೊಂದಿರುವ ಪ್ರಸಿದ್ಧ ಐತಿಹಾಸಿಕ ಕೋಟೆಯಾಗಿದ್ದು, ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿದೆ. ಈ ಕೋಟೆಯು ತನ್ನ ಬಲಿಷ್ಠ ರಕ್ಷಣಾ ವ್ಯವಸ್ಥೆ, ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಮಹತ್ವದಿಂದ ಹೆಸರುವಾಸಿಯಾಗಿದೆ.
ಕೋಟೆಯೊಳಗೆ ಜೋಡಿ ಕೋಟೆ, ಮದ್ದಿನ ಮನೆ, ಗರಡಿ ಮನೆ, ತುಪ್ಪದ ಕಣಜ ಸೇರಿದಂತೆ ಅನೇಕ ಐತಿಹಾಸಿಕ ರಚನೆಗಳನ್ನು ಕಾಣಬಹುದು. ಅಲ್ಲದೆ, ಹೈದರ್ ಅಲಿಯ ಆಳ್ವಿಕೆಯ ಅವಧಿಯಲ್ಲಿ ವೇಣುಗೋಪಾಲಸ್ವಾಮಿ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ಸ್ಥಳೀಯ ಐತಿಹ್ಯಗಳು ಹಾಗೂ ಕೆಲವು ಐತಿಹಾಸಿಕ ಉಲ್ಲೇಖಗಳು ತಿಳಿಸುವ ಸ್ಥಳವೂ ಇಲ್ಲಿದೆ.
ಪಾವಗಡ ಕೋಟೆಯ ದೂರಗಳು
- ಬೆಂಗಳೂರು – 161 ಕಿ.ಮೀ
- ತುಮಕೂರು – 101 ಕಿ.ಮೀ
- ಪಾವಗಡ – 1 ಕಿ.ಮೀ
- ಪೆನುಕೊಂಡ ರೈಲ್ವೆ ನಿಲ್ದಾಣ – 39 ಕಿ.ಮೀ
ಪಾವಗಡ ಕೋಟೆಯ ನಿರ್ಮಾಣಕ್ಕೆ ಕ್ರಿ.ಶ. 1405ರಲ್ಲಿ ಗೋಪಣ್ಣ ಎಂಬ ಸಾಮಂತನು ಅಡಿಪಾಯ ಹಾಕಿದನೆಂದು ಸ್ಥಳೀಯ ಐತಿಹಾಸಿಕ ಉಲ್ಲೇಖಗಳು ತಿಳಿಸುತ್ತವೆ.
ಈ ಕೋಟೆಯು ಏಳು ಪ್ರವೇಶ ದ್ವಾರಗಳನ್ನು ಹೊಂದಿದೆ. ಕೋಟೆಗೆ ಪ್ರವೇಶಿಸಿದಾಗ ಮೊದಲು ಕಾಣಸಿಗುವುದು ಪಟ್ಟೆ ಬಾಗಿಲು (ಮೊದಲ ದ್ವಾರ). ಅದನ್ನು ದಾಟಿದ ನಂತರ ಮದ್ದಿನ ಮನೆ ಕಾಣುತ್ತದೆ. ವಿವಿಧ ಶಾಸನಗಳಲ್ಲಿ ಈ ಸ್ಥಳವನ್ನು ಪಗೊಂಡೆ, ಪಾವಗೊಂಡ, ಪಾಮಗೊಂಡೆ ಮುಂತಾದ ಹೆಸರಗಳಿಂದ ಉಲ್ಲೇಖಿಸಲಾಗಿದೆ. ಕ್ರಿ.ಶ. 1767ರಲ್ಲಿ ಮರಾಠರು ಮಧುಗಿರಿಯನ್ನು ವಶಪಡಿಸಿಕೊಂಡ ನಂತರ ಈ ಸ್ಥಳಕ್ಕೆ “ಪಾವಗಡ” ಎಂಬ ಹೆಸರನ್ನು ಅಧಿಕೃತವಾಗಿ ಬಳಸಲಾಯಿತು ಎಂದು ಹೇಳಲಾಗುತ್ತದೆ.
ಕೋಟೆಯ ಮೂರನೇ ದ್ವಾರವನ್ನು ಆಂಜನೇಯ ಬಾಗಿಲು ಎಂದು ಕರೆಯುತ್ತಾರೆ. ಈ ದ್ವಾರವನ್ನು ದಾಟಿದ ಬಳಿಕ ಸುಮಾರು 8 ಅಡಿ ಎತ್ತರದ ಆಂಜನೇಯ ಸ್ವಾಮಿಯ ಶಿಲಾಮೂರ್ತಿ ಕಾಣಿಸುತ್ತದೆ. ಇದಲ್ಲದೆ, ಕೋಟೆಯಲ್ಲಿ ಮಧುಗಿರಿ ಬಾಗಿಲು, ಪೆನುಗೊಂಡೆ ಬಾಗಿಲು ಹಾಗೂ ನಿಡುಗಲ್ಲು ಬಾಗಿಲುಗಳೂ ಇವೆ.
ಮತ್ತೊಂದು ಐತಿಹಾಸಿಕ ಉಲ್ಲೇಖದ ಪ್ರಕಾರ, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ರಾಜಭಂಡಾರವನ್ನು ರಕ್ಷಿಸುತ್ತಿದ್ದ ಗೊಲ್ಲ ಸಮುದಾಯದ ಬಲ್ಲಪ್ಪ ನಾಯಕನು ಕ್ರಿ.ಶ. 1585ರಲ್ಲಿ ಪಾವಗಡವನ್ನು ಅಭಿವೃದ್ಧಿಪಡಿಸಿದನೆಂದು ಹೇಳಲಾಗುತ್ತದೆ. ನಂತರ ಕ್ರಿ.ಶ. 1799ರಲ್ಲಿ ಈ ಕೋಟೆಯು ಬ್ರಿಟಿಷರ ವಶವಾಯಿತು.
ಕೋಟೆಯ ಬೆಟ್ಟದ ಮೇಲ್ಭಾಗದಲ್ಲಿ ಅಕ್ಕಮ್ಮ ದೊಣೆ ಮತ್ತು ಭೀಮನ ದೊಣೆ ಎಂಬ ಎರಡು ಪ್ರಾಚೀನ ಜಲಾಶಯಗಳಿವೆ. ಅಲ್ಲದೆ ತುಪ್ಪದ ಕಣಜ ಹಾಗೂ ಬೆಟ್ಟದ ತುದಿಯಲ್ಲಿ ಸುಲ್ತಾನನ ಬತ್ತೇರಿ ಕೂಡ ಕಾಣಸಿಗುತ್ತವೆ. ಪಾವಗಡ ಕೋಟೆಯಲ್ಲಿ ಅರಮನೆ, ನೆಲಮಾಳಿಗೆ, ಬತ್ತೇರಿ, ಕಂದಕಗಳು, ಮದ್ದುಗುಂಡು ತಯಾರಿಕಾ ಕೇಂದ್ರ ಹಾಗೂ ಕಬ್ಬಿಣದ ಆಯುಧಗಳನ್ನು ತಯಾರಿಸುವ ಕಾರ್ಯಾಗಾರಗಳಿದ್ದವು ಎಂದು ಐತಿಹಾಸಿಕ ಉಲ್ಲೇಖಗಳು ತಿಳಿಸುತ್ತವೆ.
ಭೇಟಿ ನೀಡಿ



