ಪುರಾತನ ಭೀಮೇಶ್ವರ ದೇವಾಲಯವು ಕರ್ನಾಟಕದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ನೀಲಗುಂದ ಗ್ರಾಮದಲ್ಲಿದೆ. ಈ ದೇವಾಲಯವು ಕ್ರಿ.ಶ. 11ನೇ ಶತಮಾನದ ಕೊನೆಯ ಭಾಗದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾದ ತ್ರಿಕೂಟಾಚಲ ದೇವಾಲಯವಾಗಿದೆ.
ಪುರಾತನ ಭೀಮೇಶ್ವರ ದೇವಾಲಯ ನೀಲಗುಂದದ ದೂರಗಳು
- ಬೆಂಗಳೂರು – 291 ಕಿ.ಮೀ
- ಹೊಸಪೇಟೆ – 118 ಕಿ.ಮೀ
- ಹರಪನಹಳ್ಳಿ – 13 ಕಿ.ಮೀ
- ರಾಣೆಬೆನ್ನೂರು ರೈಲ್ವೆ ನಿಲ್ದಾಣ – 42 ಕಿ.ಮೀ
ನೀಲಗುಂದ ಪ್ರದೇಶವು ಹನ್ನೆರಡನೇ ಶತಮಾನದ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಬಳಪದ ಕಲ್ಲಿನ ಗಣಿಗಾರಿಕೆಗೆ ಮಹತ್ವದ ಸ್ಥಾನವನ್ನು ಪಡೆದಿತ್ತು. ಈ ದೇವಾಲಯವು ವೇಸರ ಶೈಲಿಯಲ್ಲಿದೆ. ಪೂರ್ವ–ಪಶ್ಚಿಮ ದಿಕ್ಕಿನಲ್ಲಿ ವಿಸ್ತರಿಸಿರುವ ದೇವಾಲಯವು ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಮೂರು ಗರ್ಭಗೃಹಗಳನ್ನು ಹೊಂದಿದೆ.
ಪ್ರತಿಯೊಂದು ಗರ್ಭಗೃಹವೂ ಅಂತರಾಳವನ್ನು ಹೊಂದಿದ್ದು, ಇವೆಲ್ಲವೂ ಸಭಾಮಂಟಪಕ್ಕೆ ತೆರೆದುಕೊಳ್ಳುತ್ತವೆ. ಸಭಾಮಂಟಪದ ಪೂರ್ವಕ್ಕೆ ಮುಖಮಂಟಪವಿದ್ದು, ಅದರ ಎರಡೂ ಬದಿಗಳಲ್ಲಿ ಸೋಪಾನಗಳಿವೆ. ಮುಖಮಂಟಪದ ಮುಂಭಾಗದಲ್ಲಿ ಪೂರ್ವ ದಿಕ್ಕಿಗೆ ಸೂರ್ಯನಿಗಾಗಿ ಪ್ರತ್ಯೇಕ ಗುಡಿಯಿದೆ.
ದೇವಾಲಯದ ಹೊರಭಿತ್ತಿಯು ಮುಂಚಾಚು ಮತ್ತು ಹಿನ್ನಡೆಯ ರಚನೆಗಳಿಂದ ಕೂಡಿದೆ. ಭಿತ್ತಿಯ ಮೇಲೆ ಅರ್ಧಸ್ತಂಭಗಳನ್ನು ನಿರ್ಮಿಸಿ, ಅವುಗಳ ಮೇಲೆ ವೇಸರ ಮತ್ತು ದ್ರಾವಿಡ ಶೈಲಿಯ ಕಿರುಶಿಖರಗಳನ್ನು ರೂಪಿಸಲಾಗಿದೆ. ಪಶ್ಚಿಮದ ಮುಖ್ಯ ಗರ್ಭಗೃಹದ ಮೇಲೆ ವೇಸರ ಶೈಲಿಯ ತ್ರಿಕಳ ವಿಮಾನವಿದೆ.
ಪ್ರತಿಯೊಂದು ತಳದಲ್ಲಿಯೂ ಶಾಲಾ, ಕೂಟ ಮತ್ತು ಪಂಜರದ ರಚನೆಗಳಿವೆ. ಶಾಲಾ ರಚನೆಗಳಲ್ಲಿ ಶಿವ ಮತ್ತು ನಟರಾಜ ಮುಂತಾದ ಮೂರ್ತಿಗಳನ್ನು ಕಾಣಬಹುದು. ಗರ್ಭಗೃಹಗಳ ದ್ವಾರಗಳು ಅಲಂಕೃತವಾದ ಪಂಚಶಾಖಾ ವಿನ್ಯಾಸವನ್ನು ಹೊಂದಿವೆ. ದ್ವಾರಗಳ ಕೆಳಭಾಗದ ಎರಡೂ ಬದಿಗಳಲ್ಲಿ ಶೈವ ದ್ವಾರಪಾಲಕರು ಮತ್ತು ಚಾಮರಧಾರಿಣಿಯರ ಶಿಲ್ಪಗಳನ್ನು ಕೆತ್ತಲಾಗಿದೆ.
ಸಭಾಮಂಟಪದಲ್ಲಿ ನಯಗೊಳಿಸಿದ ನಾಲ್ಕು ಅಲಂಕೃತ ಸ್ತಂಭಗಳಿದ್ದು, ಮಧ್ಯಭಾಗದಲ್ಲಿ ವೇದಿಕೆಯಿದೆ. ದೇವಾಲಯದ ಒಳಭಾಗದಲ್ಲಿರುವ ದೇವಕೋಷ್ಠಕಗಳಲ್ಲಿ ಗಣೇಶ, ಮಹಿಷಮರ್ದಿನಿ, ಸಪ್ತಮಾತೃಕೆಯರು ಮತ್ತು ಯಕ್ಷರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಸಭಾಮಂಟಪದ ಪಶ್ಚಿಮಾಭಿಮುಖ ಭಾಗದಲ್ಲಿ ಸಂಧಿಯ ರಚನೆಯಿದೆ.
ಪುರಾತನ ಚಾಲುಕ್ಯ ಶ್ರೀ ಈಶ್ವರ ದೇವಸ್ಥಾನ ನೀಲಗುಂದ
ಪುರಾತನ ಭೀಮೇಶ್ವರ ದೇವಾಲಯದ ಪಕ್ಕದಲ್ಲಿಯೇ ಪುರಾತನ ಚಾಲುಕ್ಯರ ಕಾಲದ ಶ್ರೀ ಈಶ್ವರ ದೇವಾಲಯವಿದೆ. ಪ್ರಸ್ತುತ ಈ ದೇವಾಲಯವು ಶಿಥಿಲಾವಸ್ಥೆಯಲ್ಲಿದೆ.
ಭೇಟಿ ನೀಡಿ
ಭೇಟಿ ನೀಡಿ















