ಟೇಲರ್ ಮಂಜಿಲ್

ಟೇಲರ್ ಮಂಜಿಲ್ (ಟೇಲರ್‌ನ ಬಂಗಲೆ) ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಶೋರಾಪುರ (ಸುರಪುರ) ತಾಲ್ಲೂಕಿನಲ್ಲಿರುವ ಬ್ರಿಟಿಷರ ಕಾಲದ ಐತಿಹಾಸಿಕ ಬಂಗಲೆಯಾಗಿದೆ. ಈ ಬಂಗಲೆಯನ್ನು ಕ್ರಿ.ಶ. 1844ರಲ್ಲಿ ನಿರ್ಮಿಸಲಾಯಿತು. ಇದರ ವಿಶೇಷತೆಯೆಂದರೆ, ಒಂದು ಬಾಗಿಲು ತೆರೆದಾಗ ಅದರ ವಿನ್ಯಾಸಕ್ಕೆ ಅನುಗುಣವಾಗಿ ಇತರ ಬಾಗಿಲುಗಳು ಕಂಪಿಸುವ ವಿಶೇಷ ತಂತ್ರಜ್ಞಾನ ಹೊಂದಿದೆ.

ಟೇಲರ್ ಮಂಜಿಲ್ (ಟೇಲರ್‌ನ ಬಂಗಲೆ)ದ ದೂರಗಳು

  • ಬೆಂಗಳೂರು – 456 ಕಿ.ಮೀ
  • ಯಾದಗಿರಿ – 51 ಕಿ.ಮೀ
  • ಸುರಪುರ – 4 ಕಿ.ಮೀ
  • ಯಾದಗಿರಿ ರೈಲ್ವೆ ನಿಲ್ದಾಣ – 50 ಕಿ.ಮೀ

ಟೇಲರ್ ಮಂಜಿಲ್‌ಗೆ ಬ್ರಿಟಿಷ್ ಆಡಳಿತಾಧಿಕಾರಿ ಫಿಲಿಪ್ ಮೆಡೋಸ್ ಟೇಲರ್ ಅವರ ಹೆಸರನ್ನು ಇಡಲಾಗಿದೆ. ಇದು 4 ಕೊಠಡಿಗಳು ಮತ್ತು 27 ಬಾಗಿಲುಗಳನ್ನು ಹೊಂದಿರುವ ವಿನೂತನ ವಾಸ್ತುಶಿಲ್ಪದ ಕಟ್ಟಡವಾಗಿದೆ. ಸುರಪುರ ಪಟ್ಟಣದ ಬೆಟ್ಟದ ಮೇಲಿರುವ ಈ ಬಂಗಲೆಯು ತನ್ನ ವಿಶಿಷ್ಟ ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಹಿನ್ನೆಲೆಯಿಂದ ಪ್ರಸಿದ್ಧಿಯಾಗಿದೆ. ಫಿಲಿಪ್ ಮೆಡೋಸ್ ಟೇಲರ್ ಅವರು ದಕ್ಷ ಆಡಳಿತಗಾರ, ಕಾದಂಬರಿಕಾರ ಹಾಗೂ ಪುರಾತತ್ವಜ್ಞರಾಗಿದ್ದರು.

ಫಿಲಿಪ್ ಮೆಡೋಸ್ ಟೇಲರ್

ಫಿಲಿಪ್ ಮೆಡೋಸ್ ಟೇಲರ್ ಅವರು 1808ರಲ್ಲಿ ಇಂಗ್ಲೆಂಡ್‌ನ ಲಿವರ್‌ಪೂಲ್‌ನಲ್ಲಿ ಒಬ್ಬ ವ್ಯಾಪಾರಿಯ ಕುಟುಂಬದಲ್ಲಿ ಜನಿಸಿದರು. ತಮ್ಮ 16ನೇ ವಯಸ್ಸಿನಲ್ಲಿ ಭಾರತಕ್ಕೆ ಬಂದು ಹೈದರಾಬಾದ್‌ನ ನಿಜಾಮರ ಸೈನ್ಯದಲ್ಲಿ ಸೇವೆಗೆ ಸೇರಿದರು. ತಮ್ಮ ಕಾರ್ಯಕ್ಷಮತೆಯಿಂದ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಅವರು, ಸುಮಾರು 1840ರ ವೇಳೆಗೆ ಸುರಪುರ (ಇಂದಿನ ಯಾದಗಿರಿ ಜಿಲ್ಲೆ) ಸಂಸ್ಥಾನದಲ್ಲಿ ಬ್ರಿಟಿಷ್ ಸರ್ಕಾರದ ರಾಜಕೀಯ ಪ್ರತಿನಿಧಿಯಾಗಿ ನೇಮಕಗೊಂಡರು.

ಟೇಲರ್ ಅವರು ಸುರಪುರಕ್ಕೆ ಆಗಮಿಸುವ ವೇಳೆಗೆ ಸಂಸ್ಥಾನದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಅತ್ಯಂತ ಹದಗೆಟ್ಟಿತ್ತು. ಕೃಷ್ಣಪ್ಪ ನಾಯಕನ ನಿಧನದ ನಂತರ, ಅವರ ಹಿರಿಯ ರಾಣಿ ಈಶ್ವರಮ್ಮ ತಮ್ಮ ಬಾಲಕ ಪುತ್ರ ವೆಂಕಟಪ್ಪ ನಾಯಕನ ಹೆಸರಿನಲ್ಲಿ ಆಡಳಿತ ನಡೆಸುತ್ತಿದ್ದರು. ರಾಜಮನೆತನದಲ್ಲಿ ನಡೆಯುತ್ತಿದ್ದ ಒಳಕಲಹಗಳನ್ನು ತಾಳ್ಮೆ ಮತ್ತು ಚಾತುರ್ಯದಿಂದ ನಿವಾರಿಸಲು ಟೇಲರ್ ಶ್ರಮಿಸಿದರು. ಸಂಸ್ಥಾನದ ಆಡಳಿತವನ್ನು ಸುಧಾರಿಸಿ, ಕೇವಲ ಹತ್ತು ವರ್ಷದ ವೆಂಕಟಪ್ಪ ನಾಯಕನಿಗೆ ಪಟ್ಟಾಭಿಷೇಕ ನೆರವೇರಿಸಿ, ಪಂಡಿತರಿಂದ ಉತ್ತಮ ಶಿಕ್ಷಣ ದೊರೆಯುವಂತೆ ವ್ಯವಸ್ಥೆ ಮಾಡಿದರು.

ಅವರು ರೈತರ ಸಮಸ್ಯೆಗಳನ್ನು ಪರಿಹರಿಸಿ ಕಂದಾಯ ವ್ಯವಸ್ಥೆಯನ್ನು ಸುಧಾರಿಸಿದರು. ಹೈದರಾಬಾದ್‌ನ ನಿಜಾಮರು ಸುರಪುರ ಸಂಸ್ಥಾನದ ಮೇಲೆ ವಿಧಿಸಿದ್ದ ಅನ್ಯಾಯದ ಸಾಲದ ಹೊರೆ ತಪ್ಪೆಂದು ಸಾಬೀತುಪಡಿಸಿ, ಸುರಪುರ ಸಂಸ್ಥಾನಕ್ಕೆ ಸುಮಾರು 11 ಲಕ್ಷ ರೂಪಾಯಿ ಮರುಪಾವತಿ ದೊರಕುವಂತೆ ಮಾಡಿದರು. ಅವರ ಸುಸಂಘಟಿತ ಆಡಳಿತದಿಂದ ದರೋಡೆ ಪ್ರಕರಣಗಳು ಕಡಿಮೆಯಾದವು. ಆಡಳಿತ ವೆಚ್ಚವನ್ನು ಕಡಿಮೆ ಮಾಡಿ, ಸಂಸ್ಥಾನದ ಆದಾಯವನ್ನು ಹೆಚ್ಚಿಸುವಲ್ಲಿ ಅವರು ಯಶಸ್ವಿಯಾದರು.

ರಾಜಾ ವೆಂಕಟಪ್ಪ ನಾಯಕರು ಟೇಲರ್ ಅವರಿಂದ ಆಡಳಿತ ಕೌಶಲ್ಯ, ಸ್ವಾಭಿಮಾನ, ನ್ಯಾಯಪಾಲನೆ ಮತ್ತು ಉತ್ತಮ ಆಡಳಿತದ ಮೌಲ್ಯಗಳನ್ನು ಕಲಿತರು. 1853ರ ಜೂನ್ 2ರಂದು ಟೇಲರ್ ಅವರು ಆಡಳಿತದ ಅಧಿಕಾರವನ್ನು ವೆಂಕಟಪ್ಪ ನಾಯಕರಿಗೆ ಹಸ್ತಾಂತರಿಸಿ, ನಂತರ ಬೇರಾರ್ ಪ್ರಾಂತ್ಯದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಟೇಲರ್ ಅವರ ಸೇವೆ ಮತ್ತು ಸ್ನೇಹದ ಸ್ಮರಣಾರ್ಥವಾಗಿ, ರಾಜಾ ವೆಂಕಟಪ್ಪ ನಾಯಕರು ಅವರು ವಾಸಿಸುತ್ತಿದ್ದ ಈ ಬಂಗಲೆಯನ್ನು ಖರೀದಿಸಿ, ಅದಕ್ಕೆ “ಟೇಲರ್ ಮಂಜಿಲ್” ಎಂದು ಹೆಸರಿಟ್ಟರು. ಪ್ರಸ್ತುತ ಈ ಐತಿಹಾಸಿಕ ಕಟ್ಟಡವು ಕರ್ನಾಟಕ ಸರ್ಕಾರದ ಪುರಾತತ್ವ ಇಲಾಖೆ ಸಂರಕ್ಷಣೆಯಲ್ಲಿದೆ.

ಕರ್ನಾಟಕದ ಪ್ರಾಗೈತಿಹಾಸಿಕ ಸಂಶೋಧನೆಯಲ್ಲಿ ಟೇಲರ್ ಅವರ ಪಾತ್ರ

ಕರ್ನಾಟಕದ ಪ್ರಾಗೈತಿಹಾಸಿಕ ಸಂಶೋಧನೆಯಲ್ಲಿ ಟೇಲರ್ ಅವರ ಪಾತ್ರ ಮಹತ್ವದ್ದಾಗಿದೆ. ಅವರು 1851–1862ರ ಅವಧಿಯಲ್ಲಿ ಸುರಪುರ ಪ್ರದೇಶದ ಹಗರಟಗಿ, ರಾಜನಕೋಳೂರು, ಚಿಕ್ಕನಹಳ್ಳಿ, ಶಹಾಪುರ ತಾಲ್ಲೂಕಿನ ವಿಭೂತಿಹಳ್ಳಿ ಮತ್ತು ಗೋಗಿ, ಜೇವರ್ಗಿ ತಾಲ್ಲೂಕಿನ ಜೇವರ್ಗಿ ಹಾಗೂ ಅಂಡೋಳ ಮುಂತಾದ ಸ್ಥಳಗಳಲ್ಲಿ ಕರ್ನಾಟಕದಲ್ಲೇ ಮೊದಲ ಬಾರಿಗೆ ಬೃಹತ್ ಶಿಲಾ ಸಂಸ್ಕೃತಿಗೆ ಸೇರಿದ ಕಲ್ಗೋರಿಗಳ ನೆಲೆಗಳನ್ನು ಪತ್ತೆಹಚ್ಚಿದರು. ಅಲ್ಲದೆ, ಅವುಗಳಲ್ಲಿ ಕೆಲವು ತಾಣಗಳಲ್ಲಿ ಉತ್ಖನನವನ್ನೂ ನಡೆಸಿದರು.

ಯಾದಗಿರಿ
ಸುರಪುರ (ಶೋರಾಪುರ) ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಯಾದಗಿರಿ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section