ಬಹಮನಿ ಸಮಾಧಿಗಳು

ಬಹಮನಿ ಸುಲ್ತಾನರ ಸಮಾಧಿಯ ಸಂಕೀರ್ಣವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲೂಕಿನ ಅಸ್ತೂರುನಲ್ಲಿ ಇರುವ ಬಹಮನಿ ರಾಜವಂಶದ 15 ಮತ್ತು 16 ನೇ ಶತಮಾನಗಳಲ್ಲಿ ನಿರ್ಮಿಸಲಾದ ಸಮಾಧಿಗಳಾಗಿದ್ದು, ಈ ಸಮಾಧಿಗಳು ಡೆಕ್ಕನ್ ಪ್ರದೇಶದ ಇಂಡೋ-ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿದ್ದು , ಗಣನೀಯವಾಗಿ ಹಿಂದೂ ಶೈಲಿಯ ಪ್ರಭಾವವನ್ನು ಹೊಂದಿದೆ.

ಈ ಸ್ಥಳವು ಬೆಂಗಳೂರಿನಿಂದ 766 ಕಿ.ಮೀ (NH50 ಮೂಲಕ), ೬೭೭ ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 6 ಕಿ.ಮೀ ದೂರದಲ್ಲಿದೆ. ಹಾಗೂ ಬೀದರ್ ರೈಲ್ವೆ ನಿಲ್ದಾಣದಿಂದ 7 ಕಿ.ಮೀ ದೂರದಲ್ಲಿ ಇದೆ.

ಇತಿಹಾಸ

ಬೀದರ್ ಪ್ರದೇಶವು ಸುಲ್ತಾನರ ರಾಜಧಾನಿಯಾಗಿತ್ತು. ಬಹಮನಿ ಸುಲ್ತಾನರು 14 ರಿಂದ 16 ನೇ ಶತಮಾನಗಳ ನಡುವೆ ದಕ್ಷಿಣ ಭಾರತದ ಡೆಕ್ಕನ್ ಪ್ರದೇಶವನ್ನು ಆಳಿದರು. 1439 ರಲ್ಲಿ, ಅಹ್ಮದ್ ಶಾ I ವಾಲಿ ಸುಲ್ತಾನರ ರಾಜಧಾನಿಯನ್ನು ಗುಲ್ಬರ್ಗಾದಿಂದ ಬೀದರ್‌ಗೆ ಸ್ಥಳಾಂತರಿಸಿದನು, ಇದರ ಪರಿಣಾಮವಾಗಿ ಈ ಸ್ಥಳದಲ್ಲಿ ಮೊದಲನೆಯದಾಗಿ ಅಹ್ಮದ್ ಶಾ ಸಮಾಧಿಯನ್ನು ನಿರ್ಮಿಸಲಾಯಿತು, ನಂತರದ ಕಾಲದಲ್ಲಿ ಎಂಟು ಸಮಾಧಿಗಳನ್ನು ನಿರ್ಮಿಸಲಾಗಿದೆ ಇದರಲ್ಲಿ ಬಹಮನಿ ಸುಲ್ತಾನರ ಮತ್ತು ಹಿಂದಿನ ಆಡಳಿತಗಾರರ ಹಾಗು ಕೆಲವು ರಾಣಿಯರು ಮತ್ತು ಇತರ ಕುಟುಂಬ ಸದಸ್ಯರ ಸಮಾಧಿಗಳನ್ನು ವಿಶಿಷ್ಟವಾದ ಇಂಡೋ-ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪದಲ್ಲಿ ಸಮಾಧಿಗಳನ್ನು ಈ ಸಂಕೀರ್ಣದಲ್ಲಿ ನಿರ್ಮಿಸಲಾಯಿತು.

ಈ ಸಂಕೀರ್ಣದೊಳಗೆ ಮಾಡಿದ ಮೊದಲ ಸಮಾಧಿ ಸುಲ್ತಾನ ಅಹ್ಮದ್ ಶಾ I ವಾಲಿ. ಅವರ ಸಮಾಧಿಯು ಚೌಕಾಕಾರದ ವಿನ್ಯಾಸವನ್ನು ಹೊಂದಿದ್ದು, ಪ್ರತಿ ಮುಖದ ಮೇಲೆ ಕಮಾನುಗಳನ್ನು ಹೊಂದಿದ್ದು, ಮದ್ಯ ಗುಮ್ಮಟದ ಕಿರೀಟವನ್ನು ಹೊಂದಿದೆ. ಹೊರಭಾಗದ ಗೋಡೆಗಳ ಮೇಲೆ ಕಮಾನು, ಪ್ಯಾರಪೆಟ್ ಗೋಡೆ ಮತ್ತು ಮೂಲೆಗಳಲ್ಲಿ ಅಲಂಕೃತ ಗೋಪುರಗಳಿಂದ ಅಲಂಕರಿಸಲ್ಪಟ್ಟಿದೆ. ಹಲವಾರು ಹಂತದ ಕಮಾನಿನ ಗೂಡುಗಳು ಹೊರಭಾಗದಲ್ಲಿ ಅಲಂಕರಿಸಲ್ಪಟ್ಟಿದೆ. ಕೆಲವು ಸಮಾಧಿಗಳು ಹೂವಿನ ಲಕ್ಷಣಗಳಿಂದ, ಇಸ್ಲಾಮಿಕ್ ಮಾದರಿ ಮತ್ತು ಹಿಂದೂ ರೂಪದಲ್ಲಿ ಅಲಂಕಾರವನ್ನು ಹೊಂದಿವೆ.

ಸಮಾಧಿಯ ಶಾಸನಗಳಲ್ಲಿ ರಾಜನ ಹೆಸರು, ಅವರ ಜನನ ಮತ್ತು ಮರಣದ ದಿನಾಂಕ ಮತ್ತುಆಡಳಿತ ಕಾಲವನ್ನು ಬಹಿರಂಗಪಡಿಸುತ್ತವೆ. ಪರ್ಷಿಯನ್ ಕಾವ್ಯ ಮತ್ತು ಕುರಾನ್ ಪದ್ಯಗಳನ್ನು ಸಹ ಕೆತ್ತಲಾಗಿದೆ. ಛಾವಣಿಯಲ್ಲಿ ಅಲ್ಲಾಹ್, ಮುಹಮ್ಮದ್, ಅಲಿ ಮತ್ತು ಅವನ ವಂಶಸ್ಥರ ಹೆಸರುಗಳ ಕ್ಯಾಲಿಗ್ರಫಿಯಿಂದ ಅಲಂಕರಿಸಲಾಗಿದೆ.

ಅಹ್ಮದ್ ಷಾ ಅವರ ಸಮಾಧಿಯ ಪೂರ್ವಕ್ಕೆ ಅವರ ಪತ್ನಿಯ ಸಮಾಧಿ ಇದೆ. ನಂತರ ದಕ್ಷಿಣಕ್ಕೆ ಅವರ ಮಗ ಮಹ್ಮದ್ ಖಾನ್ ಅಥವಾ ದೌದ್ ಖಾನ್ ಸಮಾಧಿಯು ಸಹ ಇದೆ, ಈ ಸಮಾಧಿಗಳು ಅಹ್ಮದ್ ಷಾ ಅವರ ಸಮಾಧಿಯ ಶೈಲಿಯಲ್ಲಿದೆ, ಆದರೆ ಗಾತ್ರದಲ್ಲಿ ಚಿಕ್ಕದಾಗಿದೆ. ಸಮಾಧಿಯೊಳಗೆ ಯಾವುದೇ ಶಾಸನವಿಲ್ಲ.

ಈ ಸಂಕೀರ್ಣದಲ್ಲಿ ಇರುವ ಸಮಾಧಿಗಳು
  • ಅಹ್ಮದ್ ಶಾ I ವಾಲಿ
  • ಅಹ್ಮದ್ ಶಾ I ವಾಲಿ ಪತ್ನಿಯ ಸಮಾಧಿ
  • ಅಹ್ಮದ್ ಶಾ I ವಾಲಿ ಮಗ ಮಹ್ಮದ್ ಖಾನ್ ಅಥವಾ ದೌದ್ ಖಾನ್ ಸಮಾಧಿ
  • ಅಲ್ಲಾದ್ದೀನ್ ಅಹ್ಮದ್ ಷಾ
  • ಹುಮಾಯೂನ್ ಜಲೀಮ್ ಷಾ
  • ಸುಲ್ತಾನ್ ಹುಮಾಯೂನ್‌ನ ಪತ್ನಿಯ ಸಮಾಧಿ
  • ನಿಜಾಮ್ ಷಾ
  • ಮುಹಮ್ಮದ್ ಷಾ III
  • ಮಹಮೂದ್ ಷಾ ಬಹಮನಿ II
  • ಶಾ ಬಹಮನಿ
  • ಕಲೀಮುಲ್ಲಾ ಶಾ ಬಹಮನಿ
  • ಅಹ್ಮದ್ ಷಾ ಬಹಮನಿ II

ಬಹಮನಿ ಸುಲ್ತಾನನ ಕುಟುಂಬದ ಸದಸ್ಯರ ಹಲವಾರು ಸಮಾಧಿಗಳಿವೆ. ಇದು ಪಿಕ್ನಿಕ್ ಮತ್ತು ವಿಶ್ರಾಂತಿಗೆ ಉತ್ತಮವಾದ ಶಾಂತ ಪ್ರದೇಶವಾಗಿದೆ. ನೈಸರ್ಗಿಕ ವಿಕೋಪದಿಂದಾಗಿ ಒಂದು ಸಮಾಧಿ ಕುಸಿದಿದೆ. ಅಧಿಕೃತ ಮಾರ್ಗದರ್ಶಿಯಾಗಿ ಬಹಮನಿ ಕುಟುಂಬದ ಸದಸ್ಯರ ಮರಿಮೊಮ್ಮಗ ಬಹಮನಿ ಆಳ್ವಿಕೆಯ ಇತಿಹಾಸ ಮತ್ತು ಸಮಾಧಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತಾನೆ. ಚೆನ್ನಾಗಿ ವಿವರಿಸಲಾಗಿದೆ. ಸಮಾಧಿಗಳ ಒಳಗೆ ಭೇಟಿ ನೀಡುವುದರಿಂದ ನಿಮಗೆ ಉತ್ತಮ ಅನುಭವ ಸಿಗುತ್ತದೆ, ಅಲ್ಲಿ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಚಟುವಟಿಕೆಗಳು ನಿಯಮಿತವಾಗಿ ನಡೆಯುತ್ತವೆ.