ಗುರುನಾನಕ್ ಜೀರಾ ಸಾಹಿಬ್

ಗುರುನಾನಕ್ ಝೀರಾ ಸಾಹಿಬ್ ಮಂದಿರವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲೂಕಿನಲ್ಲಿ ಇರುವ ಸಿಖ್ ಸಮುದಾಯದ ಪವಿತ್ರ ಮಂದಿರವಾಗಿದೆ. ಈ ಮಂದಿರವನ್ನು 1948 ರಲ್ಲಿ ನಿರ್ಮಿಸಲಾಯಿತು ಮತ್ತು ಇದನ್ನು ಮೊದಲ ಸಿಖ್ ಗುರು ಗುರುನಾನಕ್ ಅವರಿಗೆ ಸಮರ್ಪಿಸಲಾಗಿದೆ.

ಈ ಮಂದಿರವು ಬೆಂಗಳೂರಿನಿಂದ 684 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 4 ಕಿ.ಮೀ ದೂರದಲ್ಲಿದೆ. ಹಾಗೂ ಬೀದರ್ ರೈಲ್ವೆ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿ ಇದೆ.

ಇತಿಹಾಸ

ಬೀದರ್ ಸಿಖ್ ಧರ್ಮದೊಂದಿಗೆ ಬಹಳ ಹಿಂದಿನಿಂದಲೂ ಸಂಬಂಧ ಹೊಂದಿದೆ. ಏಕೆಂದರೆ ಇದು ಸಿಖ್ ಗುರುಗಳ ಐದು ಪ್ರೀತಿಪಾತ್ರರಲ್ಲಿ ಒಬ್ಬರಾದ ಭಾಯಿ ಸಾಹಿಬ್ ಸಿಂಗ್ ಅವರು ಬೀದರ್ ಮೂಲದವರಾಗಿದ್ದು, ತವರು ಪಟ್ಟಣವಾಗಿದೆ. ಒಂದು ಕಾಲದಲ್ಲಿ ಭಾಯಿ ಸಾಹಿಬ್ ಸಿಂಗ್ ಕ್ಷೌರಿಕರಾಗಿದ್ದರು. ಅವರು ಬೀದರ್‌ನ ಗುರುನಾರಾಯಣ ಮತ್ತು ಅಂಕಮ್ಮ ದಂಪತಿಗಳ ಪುತ್ರರಾಗಿದ್ದರು. ಅವರು ಮೊದಲ ಸದಸ್ಯರಾಗಿ ದೀಕ್ಷಾಸ್ನಾನ ಪಡೆದರು.

ಕ್ರಿ.ಶ. 1510 ಮತ್ತು 1514 ರ ನಡುವೆ ಗುರುನಾನಕ್ ಅವರು ದಕ್ಷಿಣ ಭಾರತದ ಮಿಷನರಿ ಪ್ರವಾಸದ ಸಮಯದಲ್ಲಿ ನಾಗಪುರ ಪ್ರವಾಸ ಮಾಡಿದ ನಂತರ ನರ್ಮದಾ ನದಿಯ ಪ್ರಾಚೀನ ಹಿಂದೂ ದೇವಾಲಯ ಓಂಕಾರೇಶ್ವರಕ್ಕೆ ಭೇಟಿ ನೀಡಿ ನಾಂದೇಡ್ ತಲುಪಿದರು . ನಾಂದೇಡ್ ನಿಂದ ಅವರು ಹೈದರಾಬಾದ್ ಮತ್ತು ಗೋಲ್ಕೊಂಡ ಕಡೆಗೆ ಪ್ರಯಾಣ ಬೆಳೆಸಿದರು, ಅವರು ಮುಸ್ಲಿಂ ಸಂತರನ್ನು ಭೇಟಿಯಾದರು ಮತ್ತು ನಂತರ ಪೀರ್ ಜಲಾಲುದ್ದೀನ್ ಮತ್ತು ಯಾಕೂಬ್ ಅಲಿಯನ್ನು ಭೇಟಿ ಮಾಡಲು ಬೀದರ್ ಗೆ ಬಂದರು.

ಗುರುಗಳು ತಮ್ಮ ಸಹಚರ ಮರ್ದಾನ ಅವರೊಂದಿಗೆ ಬೀದರ್‌ನ ಹೊರವಲಯದಲ್ಲಿ ಬಹುಕಾಲದವರೆಗೆ ತಂಗಿದ್ದರು. ಹತ್ತಿರದಲ್ಲಿ ಮುಸ್ಲಿಂ ಫಕೀರರ ಗುಡಿಸಲುಗಳು ಇದ್ದವು , ಮುಸ್ಲಿಂಮರು ಮಹಾನ್ ಗುರುಗಳ ಧರ್ಮೋಪದೇಶಗಳು ಮತ್ತು ಬೋಧನೆಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದರು. ಉತ್ತರದ ಪವಿತ್ರ ಸಂತರ ಬಗ್ಗೆ ಸುದ್ದಿ ಶೀಘ್ರದಲ್ಲೇ ಬೀದರ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಡಿತು ಮತ್ತು ಹೆಚ್ಚಿನ ಸಂಖ್ಯೆಯ ಜನರು ಅವರ ದರ್ಶನ ಪಡೆಯಲು ಮತ್ತು ಅವರ ಆಶೀರ್ವಾದ ಪಡೆಯಲು ಅವರ ಬಳಿಗೆ ಬರಲು ಪ್ರಾರಂಭಿಸಿದರು.

ಬೀದರ್‌ನಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಇತ್ತು. ಬಾವಿಗಳನ್ನು ಅಗೆದು ನೀರನ್ನು ಹೊರತೆಗೆಯಲು ಜನರು ಮಾಡಿದ ಎಲ್ಲಾ ಪ್ರಯತ್ನಗಳು ವ್ಯರ್ಥವಾಗುತಿತ್ತು. ಬಾವಿಗಳಲ್ಲಿ ನೀರು ದೊರೆತರು ಕುಡಿಯಲು ಯೋಗ್ಯವಾಗಿರುತ್ತಿರಲಿಲ್ಲ. ಜನರ ಶೋಚನೀಯ ಸ್ಥಿತಿಯನ್ನು ನೋಡಿ ಗುರುಗಳು ತುಂಬಾ ನೊಂದು, “ಸತ್ ಕರ್ತಾರ್” ಎಂದು ಉಚ್ಚರಿಸುತ್ತಾ, ಒಂದು ಕಲ್ಲನ್ನು ಸ್ಥಳಾಂತರಿಸಿ, ತನ್ನ ಮರದ ಚಪ್ಪಲಿಯಿಂದ ಆ ಸ್ಥಳದಿಂದ ಕೆಲವು ಅವಶೇಷಗಳನ್ನು ತೆಗೆದು ನೀರನ್ನು ಹೊರ ತಗೆದು ಎಲ್ಲರ ಆಶ್ಚರ್ಯಕ್ಕೆ ಪಾತ್ರರಾದರು. ಇಂದಿಗೂ ಹರಿಯುತ್ತಿರುವ ತಂಪಾದ ಮತ್ತು ಸಿಹಿ ನೀರಿನ ಬುಗ್ಗೆಯನ್ನು ನಾನಕ್ ಝಿರಾ (ಝಿರಾ = ಹೊಳೆ) ಎಂದು ಕರೆಯಲ್ಪಟ್ಟಿತು . ಗುರುದ್ವಾರದ ಬಳಿಯ ಬಂಡೆಯಿಂದ ಇನ್ನೂ ಹರಿಯುವ ಸ್ಫಟಿಕ ಸ್ಪಷ್ಟ ಹೊಳೆ ಗುರುಗಳ ಪ್ರಾರ್ಥನೆಗೆ ದೇವರು ನೀಡಿದ ಉತ್ತರ ಎಂದು ನಂಬಲಾಗಿದೆ. ಇದೆ ಸ್ಥಳದಲ್ಲಿ ಗುರುನಾನಕ್ ಝೀರಾ ಸಾಹಿಬ್ ಕ್ಷೇತ್ರವು ಅಂತಿಮವಾಗಿ ಸ್ಥಾಪನೆಯಾಯಿತು. 500 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ಹೊಳೆವು ಹರಿಯುತ್ತಿದ್ದು ಇಂದಿಗೂ ಬತ್ತಿಲ್ಲ.

ಗುರುನಾನಕ್ ಝೀರಾ ಸಾಹಿಬ್ ಸುಂದರವಾದ ಪ್ರದೇಶದಲ್ಲಿ ಸ್ಥಾಪಿತವಾಗಿದ್ದು, ಗುಡ್ಡಗಾಡು ಪ್ರದೇಶದ ಇಳಿಜಾರುಗಳ ಮತ್ತು ಎರಡು ಬೆಟ್ಟಗಳಿಂದ ಆವೃತವಾದ ಸುಂದರ ಸ್ಥಳವಾಗಿದೆ. ಸುಖಾಸನ ಕೋಣೆಯಲ್ಲಿ ಸಿಖ್ಖರ ಪವಿತ್ರ ಪುಸ್ತಕವಾದ ಗುರು ಗ್ರಂಥ ಸಾಹಿಬ್ ಅನ್ನು ಇರಿಸಲಾಗಿದೆ. ಗ್ರಂಥವನ್ನು ಓದಲು ಪ್ರತ್ಯೇಕ ಕೊಠಡಿಯು ಸಹ ಇದೆ.

ಈ ದೇವಾಲಯದಲ್ಲಿ ದರ್ಬಾರ್ ಸಾಹಿಬ್ ,ಲಿಖಾರಿ, ದಿವಾನ್ ಹಾಲ್ ಮತ್ತು ಲಂಗರ್ ಕೊಠಡಿ ಅನ್ನು ಒಳಗೊಂಡಿದೆ. ಯಾತ್ರಿಕರಿಗೆ 24 ಗಂಟೆಗಳ ಕಾಲ ರಾತ್ರಿ ಮತ್ತು ಹಗಲು ಉಚಿತ ಆಹಾರವನ್ನು ನೀಡುವ ಉಚಿತ ಸಮುದಾಯ ಅಡುಗೆಮನೆ ( ಗುರು ಕಾ ಲಂಗರ್ ) ಇದೆ. ಗುರು ತೇಜ್ ಬಹದ್ದೂರ್ ಅವರ ಸ್ಮರಣಾರ್ಥವಾಗಿ ಸಿಖ್ ಇತಿಹಾಸದ ಪ್ರಮುಖ ಘಟನೆಗಳ ಚಿತ್ರಗಳು ಮತ್ತು ವರ್ಣಚಿತ್ರಗಳನ್ನು ಚಿತ್ರಿಸುವ ಮೂಲಕ ಸಿಖ್ ವಸ್ತುಸಂಗ್ರಹಾಲಯವನ್ನು ಸಹ ನಿರ್ಮಿಸಲಾಗಿದೆ. ಅಲ್ಲಿ ದೇಣಿಗೆಗಳನ್ನು ಸ್ವೀಕರಿಸಲಾಗುತ್ತದೆ ಮತ್ತು ರಶೀದಿಗಳನ್ನು ನೀಡಲಾಗುತ್ತದೆ.

ಗುರುನಾನಕ್ ಝೀರಾ ಸಾಹಿಬ್ ಗುರುದ್ವಾರದ ಮುಂಭಾಗದ ಮೆಟ್ಟಿಲುಗಳ ಎದುರು ಸಣ್ಣ ಅಮೃತ್ ಕುಂಡ್ (ಪವಿತ್ರ ನೀರಿನ ಟ್ಯಾಂಕ್) ನಿರ್ಮಿಸಲಾಗಿದೆ. ಇಲ್ಲಿನ ಪವಿತ್ರ ಸ್ನಾನವು ದೇಹ ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ ಎಂದು ನಂಬಲಾಗಿದೆ.

ನೀರಿನ ಬುಗ್ಗೆಗೆ ವಿಶೇಷ ಗಮನ ನೀಡಲಾಗುತ್ತದೆ ಮತ್ತು ಈ ನೀರಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಗುರುದ್ವಾರವು ಸ್ವತಃ ಸುರಂಗ ಮತ್ತು ಬುಗ್ಗೆಯಂದ ಹೊರಹೊಮ್ಮುವ ನೀರಿನ ಸ್ಥಳವನ್ನು ಚೆನ್ನಾಗಿ ಅಲಂಕರಿಸಲಾಗಿ. ಗಾಜಿನ ಫಲಕದ ಮೂಲಕ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ. ಆದರೆ ಬುಗ್ಗೆಯನ್ನು ಅಪವಿತ್ರಗೊಳಿಸದಂತೆ ನೋಡಿಕೊಳ್ಳಲಾಗುತ್ತಿದೆ. ಸಂದರ್ಶಕರು ಮತ್ತು ಯಾತ್ರಿಕರು ಬುಗ್ಗೆಯಿಂದ ಬರುವ ಪವಿತ್ರ ನೀರನ್ನು ಬಾಟಲಿಗಳು ಮತ್ತು ನೀರಿನ ಕ್ಯಾನ್‌ಗಳಲ್ಲಿ ಒಯ್ಯುತ್ತಾರೆ.

ಸಿಖ್ಖರ ಪ್ರಮುಖ ಹಬ್ಬಗಳಲ್ಲಿ ಒಂದಾದ ಗುರುನಾನಕ್ ಜಯಂತಿಯಂದು ವಿಶೇಷವಾಗಿ ನಾನಕ್ ಝೀರಾ ಬೀದರ್ ಗುರುದ್ವಾರಕ್ಕೆ ಭಕ್ತರು ಸೇರುತ್ತಾರೆ. ಈ ಸಂದರ್ಭದಲ್ಲಿ ಗುರುದ್ವಾರವನ್ನು ವಿಶೇಷವಾಗಿ ಧ್ವಜಗಳು, ಬ್ಯಾನರ್‌ಗಳು ಮತ್ತು ದೀಪಗಳಿಂದ ಅಲಂಕರಿಸಲಾಗಿದೆ. ಪ್ರತಿ ವರ್ಷ ಸುಮಾರು ನಾಲ್ಕರಿಂದ ಐದು ಲಕ್ಷ ಯಾತ್ರಿಕರು ಈ ಗುರುದ್ವಾರಕ್ಕೆ ಭೇಟಿ ನೀಡುತ್ತಾರೆ.