ಮೆಥೋಡಿಸ್ಟ್ ಗುಹೆ ಚರ್ಚ್ ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ ಪಕಲವಾಡ ಪ್ರದೇಶದಲ್ಲಿರುವ ಐತಿಹಾಸಿಕ ಚರ್ಚ್ ಆಗಿದೆ. ಅಲ್ಬರ್ಟ್ ಇ. ಕುಕ್ (Albert E. Cook) ಅವರು ಬೀದರ್ನಲ್ಲಿ ಮಿಷನರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ, ಕ್ರಿ.ಶ. 1916ರಲ್ಲಿ ಈ ಚರ್ಚ್ ಅನ್ನು ನಿರ್ಮಿಸಿದರು.
ಮೆಥೋಡಿಸ್ಟ್ ಗುಹೆ ಚರ್ಚಿನ ದೂರಗಳು
- ಬೆಂಗಳೂರು – 673 ಕಿ.ಮೀ
- ಬೀದರ್ – 5 ಕಿ.ಮೀ
- ಬೀದರ್ ರೈಲ್ವೆ ನಿಲ್ದಾಣ – 4 ಕಿ.ಮೀ
- ಬೀದರ್ ವಿಮಾನ ನಿಲ್ದಾಣ – 7 ಕಿ.ಮೀ
ಮರ್ಜಾಪೂರು ಗ್ರಾಮದ ನಿವಾಸಿಯಾಗಿದ್ದ ಶ್ರೀ ಜೋಥಪ್ಪ ಅವರು ಹಿಂದೂ ಸಾಧುವಾಗಿದ್ದು, ಶ್ರೀ ಶಿವಪ್ಪ ಮತ್ತು ಶ್ರೀಮತಿ ಬಾಯಮ್ಮ ದಂಪತಿಯ ಕಿರಿಯ ಮಗನಾಗಿ 1856ರ ನವೆಂಬರ್ 27ರಂದು ಜನಿಸಿದರು.
ನಂತರ ಅವರು ಕ್ರಿಸ್ತನಲ್ಲಿ ವಿಶ್ವಾಸವಿಟ್ಟು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರು. ಅವರ ಆಧ್ಯಾತ್ಮಿಕ ಪರಿವರ್ತನೆಗೆ ಅಮೆರಿಕದ ಮಿಷನರಿಯಾಗಿದ್ದ ರೆವರೆಂಡ್ ಅಲ್ಬರ್ಟ್ ಇ. ಕುಕ್ ಅವರ ಪ್ರಭಾವ ಪ್ರಮುಖವಾಗಿತ್ತು. ಬೀದರ್ನಲ್ಲಿ ಮಿಷನರಿಯಾಗಿ ಸೇವೆ ಸಲ್ಲಿಸುತ್ತಿದ್ದ ರೆವರೆಂಡ್ ಅಲ್ಬರ್ಟ್ ಇ. ಕುಕ್ ಅವರಿಂದ ಶ್ರೀ ಜೋಥಪ್ಪ ಅವರು 1896ರ ಏಪ್ರಿಲ್ 2ರಂದು ದೀಕ್ಷಾಸ್ನಾನ (ಬ್ಯಾಪ್ಟಿಸಂ) ಪಡೆದು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರು.
ಅವರಲ್ಲಿದ್ದ ದೈವಿಕ ಪ್ರೇರಣೆಯಿಂದ, ಬಿಡುವಿನ ವೇಳೆಯಲ್ಲಿ ಈ ಗವಿಯನ್ನು ಕೊರೆಯಲು ಆರಂಭಿಸಿದರು. ಹಲವು ವರ್ಷಗಳ ನಿರಂತರ ಪ್ರಾರ್ಥನೆ, ಭಜನೆ ಮತ್ತು ಆರಾಧನೆಯ ನಂತರ, 1916ರಲ್ಲಿ ಈ ಗವಿಯನ್ನು ದೇವರ ಆಲಯವಾಗಿ ಸಮರ್ಪಿಸಿದರು.
ಬೀದರ್ ಕ್ರೈಸ್ತ ಜಾತ್ರೆಯನ್ನು ಮೊದಲ ಬಾರಿಗೆ ಆರಂಭಿಸಿದ ರೆವರೆಂಡ್ ಕೆ. ಇ. ಆಂಡರ್ಸನ್ ಅವರಿಗೆ 1927ರಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಈ ಪ್ರಾರ್ಥನಾ ಗವಿಯನ್ನು ಹಸ್ತಾಂತರಿಸಲಾಯಿತು.
ಅಂದಿನಿಂದ ಇಂದಿನವರೆಗೂ ಪ್ರತಿವರ್ಷ ಈ ದೇವಾಲಯದಲ್ಲಿ ಬೀದರ್ ಕ್ರೈಸ್ತ ಜಾತ್ರೆಯ ಆರಾಧನೆ ಹಾಗೂ ಪುನರುತ್ಥಾನ ಹಬ್ಬದ ಸೂರ್ಯೋದಯ ಪ್ರಾರ್ಥನೆಯು ಈ ಗವಿಯ ಆವರಣದಲ್ಲಿ ಭಕ್ತಿಭಾವದಿಂದ ನಡೆಯುತ್ತಿದೆ.
ಭೇಟಿ ನೀಡಿ


