ಜಗಜ್ಯೋತಿ ಬಸವಣ್ಣನವರ ಅರಿವಿನ ಮನೆಯು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಬಸವಣ್ಣನವರು ತ್ರಿವಿಧ ಲಿಂಗ ಪೂಜೆಯಲ್ಲಿ ನಿರತರಾಗಿದ್ದ ಪವಿತವಾದ ಸ್ಥಳವಾಗಿದೆ. ಆದ್ದರಿಂದ ಈ ಸ್ಥಳವು ಅರಿವಿನ ಮನೆ ಎಂದು ಪ್ರಸಿದ್ಧವಾಗಿದೆ. ಬಸವಣ್ಣನವರ ಕಾಲ ಕ್ರಿ.ಶ. 1131 ರಿಂದ 1196 ರವರೆಗೆ.
ಈ ಸ್ಥಳವು ಬೆಂಗಳೂರಿನಿಂದ 713 ಕಿ.ಮೀ (NH50 ಮೂಲಕ), 728 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 79 ಕಿ.ಮೀ ದೂರದಲ್ಲಿದೆ. ಹಾಗೂ ಬಸವಕಲ್ಯಾಣದಿಂದ 5 ಕಿ.ಮೀ ದೂರದಲ್ಲಿದೆ.
ಬಸವಣ್ಣನವರು ಬೀಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದರು. ಮುಂದೆ ಇವರು ಕಪ್ಪಡಿ ಸಂಗಮಕ್ಕೆ ಹೊರಟು ಹೋದರು. ಅಲ್ಲಿ ಗುರುಗಳಾದ ಜಾತವೇದ ಮುನಿಗಳ ಆಶ್ರಯದಲ್ಲಿ ಅವರ ಅನುಗ್ರಹದಿಂದ ಸಕಲ ವಿದ್ಯಾ ಪಾರಂಗತರಾದರು. ಗುರುಗಳ ಆದೇಶದಂತೆ ಕಲ್ಯಾಣಕ್ಕೆ ಬಂದು ಬಲದೇವ ಮಂತ್ರಿಯ ಮಗಳಾದ ಗಂಗಾಂಬಿಕೆಯನ್ನು ಮದುವೆಯಾಗಿ ಕರಣಿಕ ಕಾಯಕವನ್ನುಕೈಗೊಂಡು, ಗೃಹಸ್ಥ ಜೀವನವನ್ನು ನಡೆಸಿದರು. ಒಂದು ಸಲ ಬಿಜ್ಜಳನ ಓಲಗದಲ್ಲಿ ಲಿಪಿಯನ್ನು ಓದಿ ಸಿಂಹಾಸನದ ಕೆಳಗಿದ್ದ ಅರವತ್ತುನಾಲ್ಕು ಕೋಟಿ ಹಣ ಧನದನ್ನು ಶೋಧಿಸಿ ಬಿಜ್ಜಳ ದೊರೆಗೆ ಸಿಗುವಂತೆ ಮಾಡಿದರು. ಇವರ ಅಗಾಧವಾದ ಜಾಣತನಕ್ಕೆ ಮೆಚ್ಚಿದ ದೊರೆಯ ಬಸವಣ್ಣನವರಿಗೆ ಮಂತ್ರಿ ಪದವಿಯನ್ನು ಕೊಟ್ಟಿದ್ದಲ್ಲದೆ ತನ್ನ ತಂಗಿಯಾದ ನೀಲಲೋಚನೆಯನ್ನು (ಸಿದ್ಧರಸ ಮಂತಿಯ ಮಗಳು) ಮದುವೆ ಮಾಡಿ ಕೊಟ್ಟನು.
ಇವರ ಸಮರ್ಥ ನೇತೃತ್ವದಲ್ಲಿ ಸಾಮಾಜಿಕ, ಸಾಹಿತ್ಯಿಕ, ಧಾರ್ಮಿಕ ಹಾಗು ಆರ್ಥಿಕ ಕ್ರಾಂತಿಗಳು ಜರುಗಿ ಇತಿಹಾಸದಲ್ಲಿಯೇ ಅತಿ ಅಪೂರ್ವವೆನಿಸಿದ ಅನುಭವ ಮಂಟಪ ವೆಂಬ ಅಧ್ಯಾತ್ಮಿಕ ಮಹಾ ಸಂಸ್ಥೆಯೊಂದು ಜನ್ಮತಾಳಿತು. ವೈರಾಗ್ಯ ನಿಧಿ ಪ್ರಭುದೇವರು ಅಧ್ಯಕ್ಷರಾಗಿದ್ದ ಈ ಅನುಭವ ಮಂಟಪದ ಆಧ್ಯಾತ್ಮಿಕ ಚರ್ಚೆಯಲ್ಲಿ ಭಾಗವಹಿಸಲು ಸ್ತ್ರೀ ಪುರುಷರು ಎಂಬ ಭೇದ ಭಾವವಿರಲಿಲ್ಲ. ಬಸವಣ್ಣನವರ ದೈವೀಶಕ್ತಿಗೆ ಮಾರು ಹೋಗಿ ಕಾಶ್ಮೀರದ ಮಹಾದೇವ ಭೂಪಾಲ, ಅಫಘಾನಿಸ್ತಾನದ ಮರುಳ ಶಂಕರದೇವ, ಬಳ್ಳಿಗಾವಿಯ ಪ್ರಭುದೇವರು, ಸೊನ್ನಲಿಗೆಯ ಸಿದ್ಧರಾಮೇಶ್ವರ, ದೇವರ ಹಿಪ್ಪರಗಿಯ ಮಡಿವಾಳ ಮಾಚಿದೇವ ಮೊದಲದ ಶರಣರು ಹಾಗೂ ಉಡುತಡಿಯ ಅಕ್ಕಮಹಾದೇವಿಯಕ್ಕ, ಕಾಶ್ಮೀರದ ಮಹಾದೇವ, ಭೂಪಾಲಿನ ಪಟ್ಟದ ರಾಣಿಯಾದ ಮಹಾದೇವಿ ಮುಂತಾದ ಶರಣಿಯರು ಆಗಮಿಸಿದ್ದರಿಂದ ಈ ಕಲ್ಯಾಣವು ಅವಿಮುಕ್ತ ಕ್ಷೇತ್ರವೆನಿಸುತ್ತದೆ.
ಜಯದೇವಿತಾಯಿ ಲೀಗಡೆ ಸಮಾಧಿ
ಜಯದೇವಿತಾಯಿ ಲೀಗಡೆಯವರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ 1912ರ ಜೂನ್ 23 ರಂದು ಜನಿಸಿದರು. ಅವರು 1980ರ ನವೆಂಬರ್ 5ರಂದು ಬಸವಕಲ್ಯಾಣಕ್ಕೆ ಬಂದು ಶಾಶ್ವತವಾಗಿ ನೆಲೆಸಿದರು. ಕೊನೆಗೆ ಅಲ್ಲಿಯೇ ತಮ್ಮ ಮನೆ ನಿರ್ಮಿಸಿಕೊಂಡು, ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಶರಣತತ್ವದ ಪ್ರಸಾರ ಕಾರ್ಯಗಳಲ್ಲಿ ತೊಡಗಿಕೊಂಡರು.
ಜಯದೇವಿತಾಯಿ ಲೀಗಡೆಯವರು ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರು ಮರಾಠಿ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಸಮೃದ್ಧವಾದ ಸಾಹಿತ್ಯವನ್ನು ರಚಿಸಿದರು. ಮಂಡ್ಯದಲ್ಲಿ ನಡೆದ 48ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದರು.
ಅವರು 1986ರಲ್ಲಿ ನಿಧನರಾದರು. ಬಸವಕಲ್ಯಾಣದಲ್ಲಿರುವ ಅವರ ನಿವಾಸದ ಹಿಂಭಾಗದಲ್ಲೇ, ಭಕ್ತಿ ಭವನದ ಹಿಂದೆ, ಅವರ ಅಂತ್ಯಕ್ರಿಯೆ ನಡೆಸಲಾಯಿತು ಮತ್ತು ಅಲ್ಲಿ ಸಿದ್ಧಶೈಲ ಸಮಾಧಿ ನಿರ್ಮಿಸಲಾಗಿದೆ.
ಹೊಸ ಅನುಭವ ಮಂಟಪ
ಜನವರಿ 2021 ರಲ್ಲಿ, ಕರ್ನಾಟಕದ ಮುಖ್ಯಮಂತ್ರಿಗಳು ಬಸವಕಲ್ಯಾಣದಲ್ಲಿ ಹೊಸ ಅನುಭವ ಮಂಟಪಕ್ಕೆ ಅಡಿಪಾಯ ಹಾಕಿದರು. ಸುಮಾರು Rs.612 ಕೋಟಿ ಅಂದಾಜು ಮಾಡಲಾದ ಈ ಮಹತ್ವಾಕಾಂಕ್ಷೆಯ ಯೋಜನೆಯು ಬಸವಣ್ಣನವರ ಬೋಧನೆಗಳು ಮತ್ತು ಪರಂಪರೆಯನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ. ಪ್ರಸ್ತಾವಿತ ರಚನೆಯನ್ನು ಆರು ಅಂತಸ್ತಿನ ಕಟ್ಟಡವಾಗಿ ಕಲ್ಪಿಸಲಾಗಿದ್ದು, ಇದು ಬಸವಣ್ಣನವರ ತತ್ವಶಾಸ್ತ್ರದ ವಿವಿಧ ತತ್ವಗಳನ್ನು ಸಂಕೇತಿಸುತ್ತದೆ ಮತ್ತು ಕಲ್ಯಾಣ ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಹೊಸ ಅನುಭವ ಮಂಟಪದ ಸ್ಥಾಪನೆಯು ಬಸವಕಲ್ಯಾಣವನ್ನು ಆಧ್ಯಾತ್ಮಿಕ ಮತ್ತು ತಾತ್ವಿಕ ಪ್ರವಚನದ ಕೇಂದ್ರವಾಗಿ ಹೆಚ್ಚಿಸುವ ಮತ್ತು ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಆಸಕ್ತಿ ಹೊಂದಿರುವ ಸಂದರ್ಶಕರು ಮತ್ತು ವಿದ್ವಾಂಸರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಗವಿಮಠ
ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಕಲ್ಯಾಣ ಕರ್ನಾಟಕದ ಬೀದರ ಜಿಲ್ಲೆಯ ಬಸವಕಲ್ಯಾಣ ನಾಡಿನ ಸಂತ, ನಡೆದಾಡುವ ದೇವರು, ಅತ್ಯಂತ ಸರಳ ಜೀವಿಗಳು, ಸಿದ್ದಾಂತ ಸಿಖಾಮಣಿ ಮತ್ತು ವಚನ ಸಾಹಿತ್ಯಗಳು. ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಪರಿಚಯ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತ್ರಿಪೂರಾಂತ ಗ್ರಾಮ. ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಗವಿಮಠ, ಗುರುಸ್ಥಲ ಮಠವಾಗಿದ್ದು ಅದರಲ್ಲಿ ಗವಿಮಠವು ಪುತ್ರವರ್ಗದ ಮಠವಾಗಿದ್ದು ರಂಭಾಪುರಿ ಪೀಠದ ಶಾಖಾ ಮಠವಾಗಿದೆ. ೧೨ನೇ ಶತಮಾನದ ರೇವಣಸಿದ್ದರು ಮತ್ತು ಇವರ ಮಗ ರುದ್ರಮುನಿ ಮಹಾನ ಪವಾಡ ಪುರುಷರು. ಅನಾರೋಗ್ಯದಿಂದ ಬಳಲುತ್ತಿರುವರಿಗೆ ಗಿಡಮೂಲಿಕೆಗಳಿಂದ ಹಲವಾರು ಜನರಿಗೆ ಪವಾಡಗಳಿಂದ ಅವರನ್ನು ಗುಣಮುಖ ಮಾಡಿದ್ದಾರೆ. ಅವರಂತೆ ಈ ಮಠಕ್ಕೆ ಪೂಜ್ಯಶ್ರೀ ಷ.ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರನ್ನು ಚಿಕ್ಕ ವಯಸ್ಸಿನಲ್ಲಿಯೇ ಪೀಠಾಧಿಪತಿಯಾಗಿ ನೇಮಿಸಲಾಯಿತು. ಇವರು ಭಕ್ತಾದಿಗಳಿಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಾ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬರುತ್ತಿದ್ದಾರೆ.
ಭೇಟಿ ನೀಡಿ













