ಬಸವಣ್ಣನವರ ಅರಿವಿನ ಮನೆ ಬಸವಕಲ್ಯಾಣ

ಜಗಜ್ಯೋತಿ ಬಸವಣ್ಣನವರ ಅರಿವಿನ ಮನೆ ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನಲ್ಲಿದೆ. ಬಸವಣ್ಣನವರು ತ್ರಿವಿಧ ಲಿಂಗ ಪೂಜೆಯಲ್ಲಿ ನಿರತರಾಗಿದ್ದ ಈ ಪವಿತ್ರ ಸ್ಥಳವು “ಅರಿವಿನ ಮನೆ” ಎಂದು ಪ್ರಸಿದ್ಧವಾಗಿದೆ. ಬಸವಣ್ಣನವರ ಕಾಲಮಾನವು ಕ್ರಿ.ಶ. 1131 ರಿಂದ 1196ರವರೆಗೆ ಎಂದು ದಾಖಲಾಗಿದೆ.

ಬಸವಕಲ್ಯಾಣ ಬಸವಣ್ಣನವರ ಅರಿವಿನ ಮನೆಯ ದೂರಗಳು

  • ಬೆಂಗಳೂರು – 645 ಕಿ.ಮೀ
  • ಬೀದರ್ – 77 ಕಿ.ಮೀ
  • ಬಸವಕಲ್ಯಾಣ – 3 ಕಿ.ಮೀ
  • ಹುಮ್ನಾಬಾದ್ ರೈಲ್ವೆ ನಿಲ್ದಾಣ – 30 ಕಿ.ಮೀ
  • ಬೀದರ್ ವಿಮಾನ ನಿಲ್ದಾಣ – 78 ಕಿ.ಮೀ

ಬಸವಣ್ಣನವರು ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದರು. ಮುಂದೆ ಅವರು ಕಪ್ಪಡಿ ಸಂಗಮಕ್ಕೆ ತೆರಳಿದರು. ಅಲ್ಲಿ ಗುರುಗಳಾದ ಜಾತವೇದ ಮುನಿಗಳ ಆಶ್ರಯದಲ್ಲಿ ಅವರ ಅನುಗ್ರಹದಿಂದ ಸಕಲ ವಿದ್ಯೆಗಳಲ್ಲೂ ಪಾರಂಗತರಾದರು. ಗುರುಗಳ ಆದೇಶದಂತೆ ಕಲ್ಯಾಣಕ್ಕೆ ಬಂದು, ಬಲದೇವ ಮಂತ್ರಿಯ ಮಗಳಾದ ಗಂಗಾಂಬಿಕೆಯನ್ನು ವಿವಾಹವಾಗಿ, ಕರಣಿಕ ಕಾಯಕವನ್ನು ಕೈಗೊಂಡು ಗೃಹಸ್ಥ ಜೀವನವನ್ನು ನಡೆಸಿದರು.

ಒಮ್ಮೆ ಬಿಜ್ಜಳನ ಓಲಗದಲ್ಲಿ ಲಿಪಿಯನ್ನು ಓದಿ, ಸಿಂಹಾಸನದ ಕೆಳಗಿದ್ದ ಅರವತ್ತುನಾಲ್ಕು ಹಣವನ್ನು ಪತ್ತೆಹಚ್ಚಿ ಬಿಜ್ಜಳ ದೊರೆಗೆ ತಿಳಿಸಿದರು. ಇವರ ಅಗಾಧ ಜ್ಞಾನಕ್ಕೆ ಮೆಚ್ಚಿದ ದೊರೆಯು ಬಸವಣ್ಣನವರಿಗೆ ಮಂತ್ರಿ ಪದವಿಯನ್ನು ನೀಡಿದನು. ಅಲ್ಲದೆ, ತನ್ನ ತಂಗಿಯಾದ ನೀಲಲೋಚನೆಯನ್ನು (ಸಿದ್ಧರಸ ಮಂತ್ರಿಯ ಮಗಳು) ವಿವಾಹ ಮಾಡಿಕೊಟ್ಟನು.

ಬಸವಣ್ಣನವರ ಸಮರ್ಥ ನಾಯಕತ್ವದಲ್ಲಿ ಸಾಮಾಜಿಕ, ಸಾಹಿತ್ಯಿಕ, ಧಾರ್ಮಿಕ ಹಾಗೂ ಆರ್ಥಿಕ ಕ್ರಾಂತಿಗಳು ಜರುಗಿದವು. ಇದರ ಫಲವಾಗಿ ಇತಿಹಾಸದಲ್ಲಿ ಅಪೂರ್ವವೆಂದು ಪರಿಗಣಿಸಲ್ಪಡುವ ಅನುಭವ ಮಂಟಪ ಎಂಬ ಆಧ್ಯಾತ್ಮಿಕ ಮಹಾಸಂಸ್ಥೆಯು ಸ್ಥಾಪನೆಯಾಯಿತು. ವೈರಾಗ್ಯ ನಿಧಿಯಾದ ಪ್ರಭುದೇವರು ಅಧ್ಯಕ್ಷರಾಗಿದ್ದ ಈ ಅನುಭವ ಮಂಟಪದ ಆಧ್ಯಾತ್ಮಿಕ ಚರ್ಚೆಗಳಲ್ಲಿ ಭಾಗವಹಿಸಲು ಸ್ತ್ರೀ–ಪುರುಷರ ನಡುವೆ ಯಾವುದೇ ಭೇದಭಾವವಿರಲಿಲ್ಲ.

ಬಸವಣ್ಣನವರ ದೈವೀ ಪ್ರೇರಣೆಯಿಂದ ಕಾಶ್ಮೀರದ ಮಹಾದೇವ ಭೂಪಾಲ, ಅಫಘಾನಿಸ್ತಾನದ ಮರುಳ ಶಂಕರದೇವ, ಬಳ್ಳಿಗಾವಿಯ ಪ್ರಭುದೇವರು, ಸೊನ್ನಲಿಗೆಯ ಸಿದ್ಧರಾಮೇಶ್ವರ, ದೇವರಹಿಪ್ಪರಗಿಯ ಮಡಿವಾಳ ಮಾಚಿದೇವರು ಮೊದಲಾದ ಶರಣರು ಹಾಗೂ ಉಡುತಡಿಯ ಅಕ್ಕಮಹಾದೇವಿ, ಕಾಶ್ಮೀರದ ಮಹಾದೇವಿ (ಗಂಗಾದೇವಿ), ಭೂಪಾಲಿನ ಪಟ್ಟದ ರಾಣಿ ಮಹಾದೇವಿ ಮುಂತಾದ ಶರಣಿಯರು ಅನುಭವ ಮಂಟಪದಲ್ಲಿ ಭಾಗವಹಿಸಿದ್ದರು. ಈ ಕಾರಣದಿಂದಲೇ ಕಲ್ಯಾಣವು ಅವಿಮುಕ್ತ ಕ್ಷೇತ್ರವಾಗಿ ಪ್ರಸಿದ್ಧಿ ಪಡೆಯಿತು.

ಭೇಟಿ ನೀಡಿ
ಬಸವಕಲ್ಯಾಣ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section