ಕಣ್ವ ಜಲಾಶಯ

ಕಣ್ವ ಜಲಾಶಯವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ಇರುವ ಜಲಾಶಯವಾಗಿದೆ. ಈ ಅಣೆಕಟ್ಟನ್ನು ಕಣ್ವ ನದಿಗೆ ಅಡ್ಡಲಾಗಿ 1946ರಲ್ಲಿ ಮೈಸೂರು ರಾಜಮನೆತನದವರು ಸರ್ ಎಂ ವಿಶ್ವೇಶ್ವರಯ್ಯನವರ ಸಲಹೆಯಂತೆ ನಿರ್ಮಿಸಲಾಗಿದೆ. ಏಷ್ಯಾದಲ್ಲೇ ಸ್ವಯಂ ಚಾಲಿತ ಸೈಪನ್ ಗೇಟುಗಳನ್ನು ಹೊಂದಿರುವ ವ್ಯವಸ್ಥೆಯೊಂದಿಗೆ ನಿರ್ಮಾಣಗೊಂಡ ಎರಡನೇ ಜಲಾಶಯವಾಗಿದೆ. ಕಣ್ವ ನದಿ ಸುಮಾರು 776 ಹೆಕ್ಟೇರ್ ಆವರಿಸಿದೆ.

ಈ ಜಲಾಶಯವು ಬೆಂಗಳೂರಿಂದ 56 ಕಿ.ಮೀ ಮತ್ತು ಬೆಂಗಳೂರು ದಕ್ಷಿಣ (ರಾಮನಗರ) ದಿಂದ 12 ಕಿ.ಮೀ ದೂರದಲ್ಲಿದೆ. ಹಾಗೂ ಚನ್ನಪಟ್ಟಣ ನಗರದಿಂದ ಕೇವಲ 13 ಕಿ.ಮೀ ದೂರದಲ್ಲಿದೆ.

ಕಣ್ವ ಮಹರ್ಷಿಗಳು ರಾಮನಗರ ಹಾಗು ಮಾಗಡಿ ಸುತ್ತ ಇರುವ ಗುಹೆಗಳಲ್ಲಿ ತಪಸ್ಸು ಮಾಡುತ್ತಿದರಂತ್ತೆ, ಆದರಿಂದ ಈ ನದಿಗೆ ಕಣ್ವ ನದಿಯೆಂದು ಕರೆಯಲಾಗುತ್ತದೆ. ಕಣ್ವ ನದಿಯು ಕಾವೇರಿ ನದಿಯ ಉಪನದಿಯಾಗಿದೆ.

ಈ ಜಲಾಶಯದ ಮುಖ್ಯ ಉದ್ದೇಶ ನೀರಾವರಿಗಾಗಿ. ಕಣ್ವ ಜಲಾಶಯದ ಇನ್ನೊಂದು ಬದಿಯಲ್ಲಿ ಮೀನುಗಾರಿಕೆ ತರಬೇತಿ ಮತ್ತು ಸಂಶೋಧನಾ ಕೇಂದ್ರವನ್ನು ನೀವು ನೋಡಬಹುದು, ಮೀನು ಸಾಕಣೆಯ ಮೂಲಕ ಗ್ರಾಮಸ್ಥರು ಸ್ವಾವಲಂಬಿಯಾಗುವಂತೆ ಮಾಡುವುದು ಮುಖ್ಯ ಉದ್ದೇಶವಾಗಿತ್ತು. ಇದು ತನ್ನ ಪಕ್ಷಿಸಂಕುಲದಿಂದಾಗಿ ಪ್ರವಾಸಿ ತಾಣವಾಗಿ ಜನಪ್ರಿಯವಾಗಿದೆ, ಚನ್ನಪಟ್ಟಣ ಹತ್ತಿರದ ಕೃಷಿ ಭೂಮಿಗೆ ಮುಖ್ಯ ನೀರಿನ ಸಂಪನ್ಮೂಲವಾಗಿದೆ.