ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ

ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ಗ್ರಾಮದಲ್ಲಿರುವ 12ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿದ ಪುರಾತನ ದೇವಾಲಯವಾಗಿದೆ. ಈ ದೇವಾಲಯವು ಬೆಂಗಳೂರು–ಮೈಸೂರು ಹೆದ್ದಾರಿಯ ಪಕ್ಕದಲ್ಲಿದೆ.

ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದ ದೂರಗಳು

  • ಬೆಂಗಳೂರು – 52 ಕಿ.ಮೀ
  • ರಾಮನಗರ – 5 ಕಿ.ಮೀ
  • ಚನ್ನಪಟ್ಟಣ – 5 ಕಿ.ಮೀ
  • ರಾಮನಗರ ರೈಲ್ವೆ ನಿಲ್ದಾಣ – 4 ಕಿ.ಮೀ

ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದ ಸುತ್ತಮುತ್ತ ಕೆಂಪು ಬಣ್ಣದ ಕಲ್ಲಿನ ಬಂಡೆಗಳು ಹೆಚ್ಚಾಗಿ ಕಂಡುಬರುವುದರಿಂದ ಈ ಪ್ರದೇಶಕ್ಕೆ ‘ಕೆಂಗಲ್ಲು’ ಎಂಬ ಹೆಸರು ಬಂದಿದೆ. ಅದರಿಂದ ಇಲ್ಲಿರುವ ದೇವಾಲಯವು ‘ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಾಲಯ’ವೆಂದು ಪ್ರಸಿದ್ಧಿಯಾಗಿದೆ. 12ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿದ ಈ ದೇವಾಲಯದ ಮುಂಭಾಗವನ್ನು ವಿಧಾನಸೌಧದ ನಿರ್ಮಾತೃ ಶ್ರೀ ಕೆಂಗಲ್ ಹನುಮಂತಯ್ಯ ಅವರು 1969ರಲ್ಲಿ ಜೀರ್ಣೋದ್ಧಾರಗೊಳಿಸಿದರು. ಕೆಂಪು ಕಲ್ಲಿನಲ್ಲಿ ಉದ್ಭವಿಸಿದ ಶ್ರೀ ಕೆಂಗಲ್ ಆಂಜನೇಯಸ್ವಾಮಿಯನ್ನು ಕಣ್ವ ಮಹರ್ಷಿ ಮತ್ತು ವ್ಯಾಸ ಮಹರ್ಷಿಗಳು ಆರಾಧಿಸಿದ್ದಾರೆ ಎಂಬ ನಂಬಿಕೆಯಿದೆ.

ಶ್ರೀ ಆಂಜನೇಯಸ್ವಾಮಿಯ ಮೂರ್ತಿಯು ನಾಲ್ಕು ಕರಗಳನ್ನು ಹೊಂದಿದ್ದು, ಅವುಗಳಲ್ಲಿ ಶಂಖ, ಚಕ್ರ ಹಾಗೂ ಸೌಗಂಧಿಕ ಪುಷ್ಪವನ್ನು ಧರಿಸಿದ್ದಾನೆ. ಬಾಲದಲ್ಲಿ ಗಂಟೆಯನ್ನು ಧರಿಸಿ ವಿರಾಜಮಾನನಾಗಿರುವ ಈ ವಿಗ್ರಹವು ವಿಶಿಷ್ಟವಾಗಿದೆ. ಸಂಕ್ರಾಂತಿಯ ಮೊದಲ ದಿನ ಸೂರ್ಯನ ಕಿರಣಗಳು ನೇರವಾಗಿ ಸ್ವಾಮಿಯ ಪಾದಗಳನ್ನು ಸ್ಪರ್ಶಿಸುವುದು ಈ ದೇವಾಲಯದ ಮತ್ತೊಂದು ವಿಶೇಷತೆಯಾಗಿದೆ. ದೇವಾಲಯದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾದೇವಿ, ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಹಾಗೂ ಶ್ರೀ ಲಕ್ಷ್ಮೀನರಸಿಂಹಸ್ವಾಮಿಗಳ ವಿಗ್ರಹಗಳೂ ಇವೆ. ಪ್ರತಿವರ್ಷ ಸಂಕ್ರಾಂತಿ ಸಂದರ್ಭದಲ್ಲಿ 12 ದಿನಗಳ ಕಾಲ ಬ್ರಹ್ಮರಥೋತ್ಸವ ಹಾಗೂ ಭಾರಿ ಪ್ರಮಾಣದ ದನಗಳ ಜಾತ್ರೆ ನಡೆಯುತ್ತದೆ.

ಭೇಟಿ ನೀಡಿ
ಚನ್ನಪಟ್ಟಣ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section