ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಇರುವ, 12ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿದ ದೇವಾಲಯವಾಗಿದೆ. ಈ ದೇವಾಲಯವು ಬೆಂಗಳೂರು ಮೈಸೂರು ಹೆದ್ದಾರಿ ಮುಖ್ಯ ರಸ್ತೆಯ ಪಕ್ಕದಲ್ಲಿ ಇದೆ.
ಈ ದೇವಾಲಯವು ಬೆಂಗಳೂರಿಂದ 57 ಕಿ.ಮೀ ಮತ್ತು ರಾಮನಗರದಿಂದ 04ಕಿ.ಮೀ ದೂರದಲ್ಲಿದೆ. ಹಾಗೂ ಚನ್ನಪಟ್ಟಣ ದಿಂದ 04ಕಿ.ಮೀ ದೂರದಲ್ಲಿದೆ.
ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದ ಸುತ್ತ ಮುತ್ತ ಕೆಂಪಾದ ಕಲ್ಲು ಬಂಡೆಗಳು ಹೆಚ್ಚಾಗಿ ಕಾಣ ಸಿಗುವುದರಿಂದ ಈ ಸ್ಥಳವನ್ನು ಕೆಂಗಲ್ಲು ಎಂದು ಕರೆಯುತ್ತಾರೆ. ಆದ್ದರಿಂದ ಇಲ್ಲಿರುವ ದೇವಾಲಯವು ಕೆಂಗಲ್ ಆಂಜನೇಯ ಎಂದು ಪ್ರಸಿದ್ದಿಯಾಗಿದೆ. 12ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿದ ಈ ದೇವಾಲಯದ ಮುಂಭಾಗವನ್ನು ವಿಧಾನಸೌಧ ನಿರ್ಮಾತೃ ಶ್ರೀ ಕೆಂಗಲ್ ಹನುಮಂತಯ್ಯ ರವರು 1969ರಲ್ಲಿ ಜಿರ್ಣೋದ್ದಾರ ಮಾಡಿದರು. ಕೆಂಪುಕಲ್ಲಿನಲ್ಲಿ ಉದ್ಭವವಾದ ಶ್ರೀ ಕೆಂಗಲ್ ಆಂಜನೇಯ ಸ್ವಾಮಿಯನ್ನು ಕಣ್ವರು ಮತ್ತು ವ್ಯಾಸರು ಆರಾಧಿಸಿದ್ದಾರೆ.
ಶ್ರೀ ಆಂಜನೇಯ ಸ್ವಾಮಿಯ ಮೂರ್ತಿಯು ಕರದಲ್ಲಿ ಶಂಖ, ಚಕ್ರ, ಸೌಗಂದಿಕಾ ಪುಷ್ಪ ಹಾಗೂ ಬಾಲದಲ್ಲಿ ಗಂಟೆಯೊಂದಿಗೆ ವಿರಾಜಮಾನವಾಗಿದ್ದಾನೆ. ಸಂಕ್ರಾಂತಿಯ ಪುಣ್ಯಕಾಲದ ಮೊದಲದಿನ ಸೂರ್ಯನ ಕಿರಣಗಳು ಸ್ವಾಮಿಯ ಪಾದ ಸ್ಪರ್ಶ ಮಾಡುತ್ತವೆ. ಈ ದೇವಾಲಯದಲ್ಲಿ ಶ್ರೀರಾಮ, ಲಕ್ಷಣ, ಸೀತಾಮಾತೆ, ಶ್ರೀ ಲಕ್ಷ್ಮಿವೆಂಕಟೇಶ್ವರ, ಶ್ರೀ ಲಕ್ಷ್ಮೀನರಸಿಂಹಸ್ವಾಮಿಗಳ ವಿಗ್ರಹಗಳಿವೆ. ಪ್ರತಿ ವರ್ಷ ಸಂಕ್ರಾಂತಿಯ ಸಂದರ್ಭದಲ್ಲಿ 12 ದಿನಗಳು ಬ್ರಹ್ಮರಥೋತ್ಸವ ಹಾಗೂ ಭಾರಿ ದೊಡ್ಡ ಪ್ರಮಾಣದಲ್ಲಿ ದನಗಳ ಜಾತ್ರೆ ನಡೆಯುತ್ತದೆ.