SRS ಬೆಟ್ಟ

SRS ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನಲ್ಲಿರುವ ಒಂದು ಬೆಟ್ಟವಾಗಿದೆ. ಈ ಬೆಟ್ಟವನ್ನು ರೇವಣ್ಣ ಸಿದ್ದೇಶ್ವರ ಬೆಟ್ಟ ಇಂದು ಸಹ ಕರೆಯುತ್ತಾರೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 3066 ಅಡಿ ಎತ್ತರದಲ್ಲಿದೆ.

ಈ ಬೆಟ್ಟವು ಬೆಂಗಳೂರಿಂದ 68 ಕಿ.ಮೀ ಮತ್ತು ರಾಮನಗರದಿಂದ ಕೇವಲ 15 ಕಿ.ಮೀ ದೂರದಲ್ಲಿದೆ ಹಾಗೂ ರಾಮನಗರ ರೈಲ್ವೆ ನಿಲ್ದಾಣದಿಂದ 14 ಕಿ.ಮೀ ದೂರದಲ್ಲಿದೆ.

ಈ ಸ್ಥಳದಲ್ಲಿ ಒಟ್ಟು ಮೂರು ದೇವಾಲಯಗಳಿದ್ದು ಬೆಟ್ಟದ ಮೇಲೆ ರೇವಣಸಿದ್ದೇಶ್ವರ ದೇವಾಲಯ, ಮಧ್ಯದಲ್ಲಿ ಭೀಮೇಶ್ವರಿ ದೇವಾಲಯ ಮತ್ತು ಬೆಟ್ಟದ ಕೆಳಭಾಗದಲ್ಲಿ ರೇಣುಕಾಂಬ ದೇವಾಲಯವಿದೆ.

ಕಲಿಯುಗದಲ್ಲಿ ವೀರಶೈವ ತತ್ವವನ್ನು ಕಲಿಸಲು ಮತ್ತು ಬೋಧಿಸಲು ಬಂದಂತಹ ಐದು ಆಚಾರ್ಯರಲ್ಲಿ ರೇಣುಕಾಚಾರ್ಯರು ಒಬ್ಬರು. ಇವರನ್ನು ರೇವಾಣಾರಾಧ್ಯ ಅಥವಾ ರೇವಾಣಸಿದ್ಧ ಎಂದು ಕರೆಯುತ್ತಾರೆ. ಅವರು ವೀರಶೈವ ತತ್ವದ ಬಗ್ಗೆ ತಿಳಿಸಲು ಏಷ್ಯಾ ದೇಶದ ಎಲ್ಲೆಡೆ ಪ್ರಯಾಣ ಬೆಳೆಸಿದರು.

ರೇವಣ ಸಿದ್ದೇಶ್ವರರು ತಮ್ಮ ವೀರಶೈವ ತತ್ವದ ಅಭಿಯಾನದ ಉದ್ದಕ್ಕೂ, ಒಮ್ಮೆ ಕರ್ನಾಟಕದ ರಾಮನಗರ ಬಳಿಯ ಅವೆರಹಳ್ಳಿಯಲ್ಲಿರುವ ಪರ್ವತದ ಮೇಲೆ ವಾಸಿಸುತ್ತಿದ್ದರು. ಆ ಸ್ಥಳವನ್ನು ಪ್ರಸ್ತುತ ಪವಿತ್ರ ಶಿವಕ್ಷೇತ್ರ ಎಂದೂ ಕರೆಯುತ್ತಾರೆ. ಕೊನೆಗೆ ಅವರು ಮತ್ತೊಮ್ಮೆ ಕೊಲ್ಲಿ ಸಾಕ್ಷಿ ಕ್ಷೇತ್ರದಲ್ಲಿದ್ದಾಗ, ಶಿವನ ಇಚ್ಛೆಯಂತೆ, ಅವರು ಲಿಂಗೈಕ್ಯರಾದರು ಮತ್ತು ಶಿವನ ವಾಸಸ್ಥಾನವಾದ ಕೈಲಾಸವನ್ನು ತಲುಪಿದರು. ಅವರೇಹಳ್ಳಿಯಲ್ಲಿ ಅವರು ಅನುಷ್ಠಾನ ಮಾಡಿದ ಸ್ಥಳವನ್ನು ರೇವಣಸಿದ್ದೇಶ್ವರ ಬೆಟ್ಟ (ಬೆಟ್ಟ) ಎಂದು ಅರ್ಥೈಸಲಾಗುತ್ತದೆ.

ರೇವಣ್ಣ ಸಿದ್ದೇಶ್ವರ ಬೆಟ್ಟವು ಅನೇಕ ವಿಶಿಷ್ಟತೆಗಳಿಂದ ಕೂಡಿದೆ. ಏಕಶಿಲಾ ಗಿರಿಯಾದ ಇದು ಅತ್ಯಂತ ಕಡಿದಾಗಿದ್ದರೂ ಏರುವುದಕ್ಕೆ ಮೆಟ್ಟಿಲುಗಳಿವೆ. ಭಕ್ತಿ ಮತ್ತು ಸಾಹಸ ಎರಡೂ ಏಕೀಭವಿಸುವುದರಿಂದ ಬೆಟ್ಟ ಹತ್ತುವುದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ. ಬೆಟ್ಟದ ತಪ್ಪಲನ್ನು ಸಮೀಪಿಸುತ್ತಿದ್ದಂತೆಯೇ ಸುಂದರ ಉದ್ಯಾನವನದ ನಡುವೆ ರೇವಣ್ಣ ಸಿದ್ದೇಶ್ವರನ ತಂಗಿಯಾದ ರೇಣುಕಾಂಬೆಯ ದೇವಾಲಯವಿದೆ.