ಎಸ್‌ಆರ್‌ಎಸ್ (SRS) ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನಲ್ಲಿ ಇರುವ ಪ್ರಸಿದ್ಧ ಬೆಟ್ಟವಾಗಿದೆ. ಈ ಬೆಟ್ಟವನ್ನು ಶ್ರೀ ರೇವಣಸಿದ್ದೇಶ್ವರ ಬೆಟ್ಟ ಎಂದೂ ಕರೆಯುತ್ತಾರೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 3,066 ಅಡಿ ಎತ್ತರದಲ್ಲಿದೆ.
SRS ಬೆಟ್ಟದ ದೂರಗಳು
- ಬೆಂಗಳೂರು – 68 ಕಿ.ಮೀ
- ರಾಮನಗರ – 15 ಕಿ.ಮೀ
- ರಾಮನಗರ ರೈಲ್ವೆ ನಿಲ್ದಾಣ – 14 ಕಿ.ಮೀ
ಈ ಸ್ಥಳದಲ್ಲಿ ಒಟ್ಟು ಮೂರು ದೇವಾಲಯಗಳಿವೆ. ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ರೇವಣಸಿದ್ದೇಶ್ವರ ದೇವಾಲಯ, ಬೆಟ್ಟದ ಮಧ್ಯಭಾಗದಲ್ಲಿ ಶ್ರೀ ಭೀಮೇಶ್ವರಿ ದೇವಾಲಯ ಹಾಗೂ ಬೆಟ್ಟದ ಕೆಳಭಾಗದಲ್ಲಿ ಶ್ರೀ ರೇಣುಕಾಂಬ ದೇವಾಲಯವಿದೆ.
ಕಲಿಯುಗದಲ್ಲಿ ವೀರಶೈವ ತತ್ತ್ವವನ್ನು ಬೋಧಿಸಿ ಪ್ರಸಾರ ಮಾಡಲು ಅವತರಿಸಿದ ಐದು ಆಚಾರ್ಯರಲ್ಲಿ ರೇಣುಕಾಚಾರ್ಯರು ಒಬ್ಬರೆಂದು ನಂಬಲಾಗಿದೆ. ಇವರನ್ನು ರೇವಣಾರಾಧ್ಯ ಅಥವಾ ರೇವಣಸಿದ್ಧ ಎಂದೂ ಕರೆಯುತ್ತಾರೆ. ಅವರು ವೀರಶೈವ ತತ್ತ್ವದ ಪ್ರಚಾರಕ್ಕಾಗಿ ಏಷ್ಯಾ ಖಂಡದ ವಿವಿಧ ಭಾಗಗಳಿಗೆ ಸಂಚರಿಸಿದರೆಂದು ಹೇಳಲಾಗುತ್ತದೆ.
ರೇವಣಸಿದ್ದೇಶ್ವರರು ತಮ್ಮ ವೀರಶೈವ ತತ್ತ್ವದ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ರಾಮನಗರ ಸಮೀಪದ ಅವೇರಹಳ್ಳಿ ಗ್ರಾಮದ ಪರ್ವತದ ಮೇಲೆ ಕೆಲವು ಕಾಲ ವಾಸಿಸಿದ್ದರೆಂದು ಸ್ಥಳೀಯ ನಂಬಿಕೆಯಿದೆ. ಆ ಸ್ಥಳವು ಇಂದು ಪವಿತ್ರ ಶಿವಕ್ಷೇತ್ರವೆಂದು ಪ್ರಸಿದ್ಧವಾಗಿದೆ. ನಂತರ ಅವರು ಕೊಲ್ಲಿಸಾಕ್ಷಿ ಕ್ಷೇತ್ರದಲ್ಲಿ ಶಿವನ ಇಚ್ಛೆಯಂತೆ ಲಿಂಗೈಕ್ಯರಾದರೆಂದು ಹೇಳಲಾಗುತ್ತದೆ. ಅವೇರಹಳ್ಳಿಯಲ್ಲಿ ಅವರು ತಪಸ್ಸು ಮತ್ತು ಅನುಷ್ಠಾನ ನಡೆಸಿದ ಸ್ಥಳವೇ ಇಂದು ‘ರೇವಣಸಿದ್ದೇಶ್ವರ ಬೆಟ್ಟ’ ಎಂದು ಪ್ರಸಿದ್ಧಿಯಾಗಿದೆ.
ರೇವಣಸಿದ್ದೇಶ್ವರ ಬೆಟ್ಟವು ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಏಕಶಿಲಾ ಗಿರಿಯಾಗಿರುವ ಈ ಬೆಟ್ಟವು ಕಡಿದಾದ ಇಳಿಜಾರುಗಳನ್ನು ಹೊಂದಿದ್ದರೂ, ಮೇಲಕ್ಕೆ ಏರಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಭಕ್ತಿ ಮತ್ತು ಸಾಹಸ ಎರಡನ್ನೂ ಒಟ್ಟಿಗೆ ಅನುಭವಿಸಲು ಈ ಬೆಟ್ಟವು ಉತ್ತಮ ತಾಣವಾಗಿದೆ. ಬೆಟ್ಟದ ತಪ್ಪಲನ್ನು ತಲುಪಿದ ಕೂಡಲೇ, ಸುಂದರ ಉದ್ಯಾನವನದ ಮಧ್ಯದಲ್ಲಿ ರೇವಣಸಿದ್ದೇಶ್ವರರ ಸಹೋದರಿ ಎಂದು ಪೂಜಿಸಲ್ಪಡುವ ಶ್ರೀ ರೇಣುಕಾಂಬ ದೇವಿಯ ದೇವಾಲಯವನ್ನು ಕಾಣಬಹುದು.
ಭೇಟಿ ನೀಡಿ




