ಬರೀದ್ ಶಾಹಿ ಸಮಾಧಿಗಳು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನಲ್ಲಿ ಕಂಡುಬರುವ ಬರೀದ್ ಶಾಹಿ ರಾಜವಂಶದ ಸಮಾಧಿಗಳಾಗಿವೆ. ಈ ಸ್ಥಳವು ಬೀದರ್ ಕೇಂದ್ರ ಬಸ್ ನಿಲ್ದಾಣದ ಹಿಂಭಾಗದಲ್ಲಿ ಇದೆ. ಸಮಾಧಿಗಳನ್ನು ಡೆಕ್ಕನ್ ಸುಲ್ತಾನರ ವಿಶಿಷ್ಟ ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ, ಇದು ಆ ಪ್ರದೇಶದ ಐತಿಹಾಸಿಕ ಮತ್ತು ವಾಸ್ತುಶಿಲ್ಪ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.
ಈ ಸ್ಥಳವು ಬೆಂಗಳೂರಿನಿಂದ 750 ಕಿ.ಮೀ (NH-50 ಕರ್ನಾಟಕದ ಮೂಲಕ), ಹೈದರಾಬಾದ್‌ನಿಂದ 711 ಕಿ.ಮೀ (NH-44 ಮೂಲಕ), ಬೀದರ್ ಕೇಂದ್ರ ಬಸ್ ನಿಲ್ದಾಣದಿಂದ 500 ಮೀಟರ್ ಮತ್ತು ಬೀದರ್ ರೈಲ್ವೆ ನಿಲ್ದಾಣದಿಂದ 2 ಕಿ.ಮೀ ದೂರದಲ್ಲಿದೆ.
ಬರೀದ್ ಶಾಹಿ ರಾಜವಂಶವು 1492 ರಿಂದ 1695 ರವರೆಗೆ ಆಳ್ವಿಕೆ ನಡೆಸಿತ್ತು. ಇಲ್ಲಿನ ಸಮಾಧಿಗಳನ್ನು 16 ಮತ್ತು 17ನೇ ಶತಮಾನಗಳಲ್ಲಿ, ಮಧ್ಯಕಾಲೀನ ಅವಧಿಯಲ್ಲಿ ನಿರ್ಮಿಸಲಾಗಿದೆ.
ಖಾಸಿಮ್ ಬರೀದ್ ಅವರ ಸಮಾಧಿಯು ಅವರ ಮಗ ಅಮೀರ್ ಬರೀದ್ ಅವರ ಅಪೂರ್ಣ ಸಮಾಧಿಯ ಪೂರ್ವದಲ್ಲಿ ಇದೆ. ಅಮೀರ್ ಬಾರೀದ್ ತನ್ನ ಸಮಾಧಿಯ ನಿರ್ಮಾಣವನ್ನು ಪ್ರಾರಂಭಿಸಿದ್ದರು, ಆದರೆ ಸಮಾಧಿ ಪೂರ್ಣಗೊಳ್ಳುವ ಮೊದಲು 1542 CE ರಲ್ಲಿ ನಿಧನರಾದರು.
ಅಲಿ ಬರೀದ್ ಅವರ ಸಮಾಧಿ ಅವರ ಸಾವಿಗೆ ಮೂರು ವರ್ಷಗಳ ಮೊದಲು, 984 ಹಿಜ್ರಿ (1576–1577 CE) ರಂದು ಪೂರ್ಣಗೊಂಡಿತು. ಸಮಾಧಿಯ ನೈಋತ್ಯದಲ್ಲಿರುವ ವೇದಿಕೆಯಲ್ಲಿ ಅಲಿ ಬಾರೀದ್ ಅವರ ಉಪಪತ್ನಿಗಳಿಗೆ ಸೇರಿದ 67 ಸಮಾಧಿಗಳಿವೆ.
ಇಬ್ರಾಹಿಂ ಬರೀದ್ ಅವರ ಸಮಾಧಿ, ಅವರ ತಂದೆ ಅಲಿ ಬರೀದ್ ಅವರ ಸಮಾಧಿಯ ಪ್ರತಿರೂಪವಾಗಿದ್ದು, 6 ಅಡಿ ಎತ್ತರದ ವೇದಿಕೆಯ ಮೇಲೆ ನಿರ್ಮಿಸಲಾಗಿದೆ. ಖಾಸಿಮ್ ಬರೀದ್ ಅವರ ಸಮಾಧಿಯ ಪೂರ್ವ ತುದಿಯಲ್ಲಿ ಒಂದು ಈದ್ಗಾ ಇದೆ, ಇದನ್ನು ಬಹಮನಿ ಅವಧಿಯಲ್ಲಿ ನಿರ್ಮಿಸಿದ್ದರೇ ಎಂದು ನಂಬಲಾಗುತ್ತದೆ.
ಎರಡು ಅಂತಸ್ತಿನ ದ್ವಾರವು ಸಮಾಧಿಯ ಆವರಣಕ್ಕೆ ಪ್ರವೇಶವನ್ನು ಒದಗಿಸುತ್ತದೆ. ಆವರಣದೊಳಗೆ, ಮಾವಿನ ಮರಗಳ ನೆರಳಿನಲ್ಲಿ ಹಲವಾರು ಸಮಾಧಿಗಳು ಇವೆ. ಖಾಸಿಮ್ ಬರೀದ್ II ರ ಸಮಾಧಿ ಇಬ್ರಾಹಿಂ ಬರೀದ್ ಅವರ ಸಮಾಧಿಯ ದಕ್ಷಿಣಭಾಗದಲ್ಲಿ ಸ್ಥಿತಿಯಾಗಿದೆ.
ಬರೀದ್ ಶಾಹಿ ಗಾರ್ಡನ್
ಬರೀದ್ ಶಾಹಿ ಸಮಾಧಿಗಳ ಆವರಣದ ಹಿಂದೆ ರಸ್ತೆಯ ಆಚೆಗೆ ಬರೀದ್ ಶಾಹಿ ಉದ್ಯಾನವಿದೆ. ಈ ಉದ್ಯಾನವು ಬರೀದ್ ಶಾಹಿ ರಾಜವಂಶದ ಆಡಳಿತಗಾರರ ಸಮಾಧಿಗಳನ್ನು ಹೊಂದಿದ್ದು, ವಿಶೇಷವಾಗಿ ಅಲಿ ಬರೀದ್ ಶಾಹಿ ಮತ್ತು ಅವರ ಮಗ ಇಬ್ರಾಹಿಂ ಬರೀದ್ ಶಾಹಿಯವರ ಸಮಾಧಿಗಳು ಇಲ್ಲಿ ಸೇರ್ಪಡೆಯಾಗಿವೆ.
ಅಲಿ ಬರೀದ್ ಶಾಹಿ 1542 ರಿಂದ 1580 ರವರೆಗೆ ಆಳ್ವಿಕೆ ನಡೆಸಿದ್ದು, ಅವರು ಬರೀದ್ ಶಾಹಿ ರಾಜವಂಶದ ಅತ್ಯಂತ ಪ್ರಮುಖ ಆಡಳಿತಗಾರರಾಗಿದ್ದರು. ಅವರು ಕಲೆ, ವಾಸ್ತುಶಿಲ್ಪ ಮತ್ತು ಸಾಹಿತ್ಯದ ಪೋಷಕರು ಮತ್ತು ಅವರ ಸಮಾಧಿಯನ್ನು ಬರೀದ್ ಶಾಹಿ ವಾಸ್ತುಶಿಲ್ಪದ ಒಂದು ಮೇರುಕೃತಿ ಎಂದು ಪರಿಗಣಿಸಲಾಗಿದೆ.
ಈ ಉದ್ಯಾನವು ಕೊನೆಯ ಸುಲ್ತಾನನಾದ ಖಾಸಿಮ್ ಬರೀದ್ II ರ ಸಮಾಧಿಯನ್ನು ಒಳಗೊಂಡಂತೆ 8 ಸಮಾಧಿಗಳನ್ನು ಹೊಂದಿದ್ದು, ಸುಂದರವಾದ ಪರಿಸರದಲ್ಲಿ ನೆಲೆಸಿದೆ. ಉದ್ಯಾನಕ್ಕೆ ಪ್ರವೇಶಕ್ಕಾಗಿ Rs.10 ಶುಲ್ಕವಿದೆ. ಉದಯದಿಂದ ಸಂಜೆ 11:30ರವರೆಗೆ ತೆರೆಯಲಾಗಿದ್ದು, ಸೋಮವಾರ ಮುಚ್ಚಲಾಗುತ್ತದೆ.
ಭೇಟಿ ನೀಡಿ
















