ಶ್ರೀ ಪಾಪನಾಶ ಮಹಾದೇವಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆ, ಬೀದರ್ ತಾಲ್ಲೂಕಿನ ಶಿವನಗರ ಬಡಾವಣೆಯಲ್ಲಿ ಇರುವ ಹಿಂದೂ ದೇವರು ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಈ ದೇವಾಲಯವು ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧವಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ 757 ಕಿ.ಮೀ (NH50 — ಕರ್ನಾಟಕದ ಮೂಲಕ), 683 ಕಿ.ಮೀ (NH44 — ಹೈದರಾಬಾದ್ ಮೂಲಕ) ಮತ್ತು ಬೀದರ್ನಿಂದ 5 ಕಿ.ಮೀ ದೂರದಲ್ಲಿದೆ. ಬೀದರ್ ರೈಲ್ವೆ ನಿಲ್ದಾಣದಿಂದ 4 ಕಿ.ಮೀ ದೂರವಿದೆ.
ದೇವಾಲಯದ ಇತಿಹಾಸ
ಈ ಶಿವ ದೇವಾಲಯದ ಗರ್ಭಗುಡಿಯಲ್ಲಿ ಒಂದು ಬೃಹತ್ ಶಿವಲಿಂಗವಿದೆ. ಈ ದೇವಾಲಯದ ಇತಿಹಾಸವು ತ್ರೇತ್ರಾಯುಗದ ಕಾಲಕ್ಕೆ ಸಂಪರ್ಕ ಹೊಂದಿದೆ. ರಾವಣನ ಸಂಹಾರದ ನಂತರ, ಪ್ರಭು ಶ್ರೀರಾಮಚಂದ್ರನು ಬ್ರಹ್ಮಹತ್ಯೆ ದೋಷ ನಿವಾರಣೆಗೆ ಅಯೋಧ್ಯೆಗೆ ತೆರಳುವ ಮಾರ್ಗದ ಉದ್ದಕ್ಕೂ ಅನೇಕ ಶಿವಲಿಂಗಗಳನ್ನು ಪ್ರತಿಷ್ಠಾಪಿಸಿದರು. ಈ ಶಿವಲಿಂಗಗಳಲ್ಲಿ ಪಾಪನಾಶ ಶಿವಲಿಂಗವು ವಿಶೇಷ ಮಹತ್ವ ಹೊಂದಿದೆ.
ಶ್ರೀರಾಮಚಂದ್ರನು ಶಿವಭಕ್ತ ಹಾಗೂ ರಾವಣನ ಸಂಹಾರದ ಪಾಪ ನಿವಾರಣೆಗೆ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿದರು. ಶಿವ ದೇವರಿಗೆ ಅಭಿಷೇಕ ಮಾಡಲು ನೀರು ಇಲ್ಲದ ಕಾರಣ, ಶ್ರೀರಾಮಚಂದ್ರನು ಸ್ವತಃ ಬಾಣದಿಂದ ಕೊಳ (ತೀರ್ಥ) ನಿರ್ಮಿಸಿದರು. ಈ ಅದ್ಭುತ ತೀರ್ಥವೇ ಪಾಪನಾಶ ತೀರ್ಥ. ಭಕ್ತರು ಈ ಕೊಳದಲ್ಲಿ ಸ್ನಾನ ಮಾಡಿ ದೇವಾಲಯಕ್ಕೆ ಪ್ರವೇಶಿಸುತ್ತಾರೆ. ವಿಶೇಷವಾಗಿ, ಈ ತೀರ್ಥವು ಬೇಸಿಗೆ ಕಾಲದಲ್ಲೂ ಬತ್ತುವುದಿಲ್ಲ.
ಪಾಪನಾಶ ದೇವಾಲಯದ ಗರ್ಭಗುಡಿಯಲ್ಲಿ ಶ್ರೀರಾಮಚಂದ್ರ ಪ್ರತಿಷ್ಠಾಪಿಸಿದ ದೊಡ್ಡ ಶಿವಲಿಂಗವಿದ್ದು, ಗರ್ಭಗುಡಿಯ ಹೊರಗೆ ಮೂರು ಸಣ್ಣ ಶಿವಲಿಂಗಗಳಿವೆ. ಶ್ರಾವಣ ಮಾಸದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಭೇಟಿ ನೀಡಿ










