ಚನ್ನಗಿರಿ ಕೋಟೆ

ಚನ್ನಗಿರಿ ಕೋಟೆಯು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ಇರುವ ಒಂದು ಐತಿಹಾಸಿಕ ಕೋಟೆಯಾಗಿದೆ. ಈ ಕೋಟೆಯನ್ನು ಕೆಳದಿ ರಾಣಿ ಚೆನ್ನಮ್ಮ ಅವರು ನಿರ್ಮಿಸಿದರು. ಈ ಕೋಟೆಯನ್ನು ಮಣ್ಣು, ಕಲ್ಲು ಮತ್ತು ಗಾರೆಯಿಂದ ನಿರ್ಮಿಸಲಾಗಿದೆ.

ಚನ್ನಗಿರಿ ಕೋಟೆಯ ದೂರಗಳು

  • ಬೆಂಗಳೂರು – 300 ಕಿ.ಮೀ
  • ದಾವಣಗೆರೆ – 45 ಕಿ.ಮೀ
  • ಚನ್ನಗಿರಿ – 27 ಕಿ.ಮೀ
  • ಹೊಳಲ್ಕೆರೆ ರೈಲ್ವೆ ನಿಲ್ದಾಣ – 27 ಕಿ.ಮೀ
  • ಭದ್ರಾವತಿ ರೈಲ್ವೆ ನಿಲ್ದಾಣ – 27 ಕಿ.ಮೀ

ಕೋಟೆಯ ವಿನ್ಯಾಸ

ಪ್ರಸ್ತುತ ಚನ್ನಗಿರಿಯ ಪಶ್ಚಿಮ ಭಾಗದಲ್ಲಿರುವ ಈ ಕೋಟೆಯು ಎರಡು ಸುತ್ತಿನ ಗೋಡೆಗಳನ್ನು ಹೊಂದಿದ್ದು, ಮಣ್ಣು, ಗಾರೆ ಮತ್ತು ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ. ಕೋಟೆಗೆ ಕೊತ್ತಳವಿದ್ದು, ಅದರ ಮುಖ್ಯ ದ್ವಾರವು ಉತ್ತರ ದಿಕ್ಕಿನಲ್ಲಿದೆ. ಸಾಮಾನ್ಯವಾಗಿ ಅಂಡಾಕಾರದಲ್ಲಿರುವ ಈ ಕೋಟೆಗೆ ಏಳು ಬುರುಜುಗಳು ಹಾಗೂ ಎರಡು ಗೋಪುರಗಳಿವೆ.

ಕೋಟೆಯ ಮೇಲ್ಭಾಗದಲ್ಲಿ ಒಂದು ದೊಡ್ಡ ತಗ್ಗಿದ್ದು, ಅದರಲ್ಲಿ ಮಳೆಯ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಈಶಾನ್ಯ ಭಾಗದಲ್ಲಿ ಬಂಡೆಯನ್ನು ಕೊರೆದು ನಿರ್ಮಿಸಲಾದ ಒಂದು ಕೊಳವಿದ್ದು, ಅದಕ್ಕೆ ಸೋಪಾನಗಳನ್ನು ನಿರ್ಮಿಸಲಾಗಿದೆ. ಕೋಟೆಯ ಮೇಲ್ಭಾಗದಲ್ಲಿ ಕೆಲವು ಪುರಾತನ ಕಟ್ಟಡಗಳ ಅಡಿಪಾಯಗಳೂ ಕಾಣಿಸುತ್ತವೆ. ಅಲ್ಲದೆ, ಕೋಟೆಯ ಮೇಲ್ಭಾಗದಲ್ಲಿ 18ನೇ ಶತಮಾನಕ್ಕೆ ಸೇರಿದುದೆಂದು ನಂಬಲಾಗುವ ಶ್ರೀ ರಂಗನಾಥಸ್ವಾಮಿ ದೇವಾಲಯವಿದ್ದು, ಅಲ್ಲಿ ವಿಷ್ಣುವಿನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

ಚನ್ನಗಿರಿಯ ಇತಿಹಾಸ

ಈ ಊರಿಗೆ 16ನೇ ಮತ್ತು 17ನೇ ಶತಮಾನಗಳ ಇತಿಹಾಸವಿದೆ. ಈ ಪ್ರದೇಶವು ಆರಂಭದಲ್ಲಿ “ಅಸಂಡಿನಾಡು” ಎಂಬ ಹೆಸರಿನಿಂದ ಗಂಗರ ಅಧೀನದಲ್ಲಿತ್ತು. ನಂತರ ಕಲ್ಯಾಣಿ ಚಾಲುಕ್ಯರ ಆಳ್ವಿಕೆಯಲ್ಲಿ “ನೊಳಂಬವಾಡಿ” ಎಂದು ಕರೆಯಲ್ಪಟ್ಟಿತು. ಉಚ್ಚಂಗಿಯ ಪಾಂಡ್ಯರ ಆಳ್ವಿಕೆಯಲ್ಲಿ ಇದು “ಹುಲಿಕೆರೆ” ಎಂದು ಪ್ರಸಿದ್ಧಿಯಾಯಿತು. ಬಳಿಕ 17ನೇ ಶತಮಾನದಲ್ಲಿ ಕೆಳದಿ ಸಂಸ್ಥಾನದ ಆಡಳಿತಕ್ಕೆ ಒಳಪಟ್ಟಿತು.

ಈ ಪ್ರದೇಶದ ಬೆಟ್ಟದ ಮೇಲೆ ಕೆಳದಿ ರಾಣಿ ಚೆನ್ನಮ್ಮ ಅವರು ಕೋಟೆಯನ್ನು ನಿರ್ಮಿಸಿದ ನಂತರ ಈ ಸ್ಥಳಕ್ಕೆ “ಚನ್ನಗಿರಿ” ಎಂಬ ಹೆಸರು ಬಂದಿದೆ. ಚನ್ನಗಿರಿಯ ಮೂಲ ಹೆಸರು “ಹುಲಿಕೆರೆ” ಎಂದು ಹೇಳಲಾಗುತ್ತದೆ. ಚನ್ನಗಿರಿಯ ಐತಿಹಾಸಿಕ ಕೇಂದ್ರಬಿಂದುವೇ ಚನ್ನಗಿರಿ ಕೋಟೆಯಾಗಿದೆ.

ಭೇಟಿ ನೀಡಿ
ಚನ್ನಗಿರಿ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ದಾವಣಗೆರೆ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section