ಸೌಮ್ಯಕೇಶವ ದೇವಾಲಯವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿರುವ ಪ್ರಸಿದ್ಧ ಪುರಾತನ ವಿಷ್ಣು ದೇವಾಲಯವಾಗಿದೆ. ಈ ದೇವಾಲಯವನ್ನು ಹೊಯ್ಸಳ ಹಾಗೂ ವಿಜಯನಗರ ಅರಸರ ಕಾಲದಲ್ಲಿ ಹಂತ ಹಂತವಾಗಿ ನಿರ್ಮಿಸಲಾಗಿದೆ. ದೇವಾಲಯವು ಗೋಪುರ, ಗರ್ಭಗೃಹ, ಪ್ರದಕ್ಷಿಣಾಪಥ ಹಾಗೂ ಪಾತಾಳ ಅಂಕಣವನ್ನು ಒಳಗೊಂಡಿದೆ.
ಈ ದೇವಾಲಯದ ಶಿಖರವು ಕರ್ನಾಟಕದಲ್ಲಿನ ಅತ್ಯಂತ ಎತ್ತರದ ಶಿಖರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇದರ ಭವ್ಯ ಗೋಪುರವನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿದೆ.
ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಿಸಲಾದ ಈ ದೇವಾಲಯವು ತ್ರಿಕೂಟಾಚಲ ಶೈಲಿಯ ವಿನ್ಯಾಸವನ್ನು ಹೊಂದಿದ್ದು, ಇಲ್ಲಿ ಕ್ಷೇತ್ರದ ಪ್ರಧಾನ ದೇವರಾಗಿ ಸೌಮ್ಯಕೇಶವನು ಆರಾಧಿಸಲ್ಪಡುತ್ತಾನೆ.
ನಾಗಮಂಗಲ ಸೌಮ್ಯಕೇಶವ ದೇವಾಲಯದ ದೂರಗಳು
- ಬೆಂಗಳೂರು – 118 ಕಿ.ಮೀ
- ಮಂಡ್ಯ – 42 ಕಿ.ಮೀ
- ನಾಗಮಂಗಲ – 1 ಕಿ.ಮೀ
- ಮಂಡ್ಯ ರೈಲ್ವೆ ನಿಲ್ದಾಣ – 43 ಕಿ.ಮೀ
ಇಲ್ಲಿನ ಕೇಶವನ ವಿಗ್ರಹವು ಸೌಮ್ಯವಾದ ಮುಖಭಾವವನ್ನು ಹೊಂದಿರುವುದರಿಂದ, ಇಲ್ಲಿ ನೆಲೆಸಿರುವ ಪರಮಾತ್ಮನನ್ನು ‘ಸೌಮ್ಯಕೇಶವ’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇತರ ಕೇಶವ ದೇವಾಲಯಗಳಲ್ಲಿ ಸ್ವಾಮಿಯು ಬಲಗೈಯಲ್ಲಿ ಚಕ್ರ ಹಾಗೂ ಎಡಗೈಯಲ್ಲಿ ಶಂಖವನ್ನು ಹಿಡಿದು ಭಕ್ತರಿಗೆ ದರ್ಶನ ನೀಡುತ್ತಾನೆ.
ಆದರೆ ಈ ದೇವಾಲಯದಲ್ಲಿ ಸ್ವಾಮಿಯು ಬಲಗೈಯಲ್ಲಿ ಶಂಖ ಹಾಗೂ ಎಡಗೈಯಲ್ಲಿ ಚಕ್ರವನ್ನು ಹಿಡಿದು, ಶ್ರೀದೇವಿ ಮತ್ತು ಭೂದೇವಿಯರ ಸಮೇತ ನಿಂತ ಭಂಗಿಯಲ್ಲಿ ಭಕ್ತರಿಗೆ ದರ್ಶನ ನೀಡುವುದು ವಿಶೇಷವಾದ ವೈಶಿಷ್ಟ್ಯವಾಗಿದೆ.
ಭೇಟಿ ನೀಡಿ








