ಬಸದಿ ಬೆಟ್ಟ ಮಂದರಗಿರಿ

ಮಂದರಗಿರಿ (ಬಸದಿ ಬೆಟ್ಟ)ವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುಮಕೂರು ತಾಲ್ಲೂಕಿನ ಪಂಡಿತನಹಳ್ಳಿ ಗ್ರಾಮದಲ್ಲಿ ಇದೆ. ಮಂದರಗಿರಿ ಒಂದು ಏಕಶಿಲಾ ಬೆಟ್ಟವಾಗಿದ್ದು, ಇದನ್ನು “ಬಸದಿ ಬೆಟ್ಟ” ಎಂದೂ ಕರೆಯುತ್ತಾರೆ. ಭಾರತದ ಬೃಹತ್ ಏಕಶಿಲಾ ಬೆಟ್ಟಗಳಲ್ಲಿ ಒಂದಾಗಿ ಪರಿಗಣಿಸಲ್ಪಡುವ ಈ ಬೆಟ್ಟದ ಮೇಲೆ ನಾಲ್ಕು ಜೈನ ಬಸದಿಗಳಿವೆ. ಈ ಜೈನ ಬಸದಿಗಳ ಕಾರಣದಿಂದಲೇ ಈ ಬೆಟ್ಟಕ್ಕೆ “ಬಸದಿ ಬೆಟ್ಟ” ಎಂಬ ಹೆಸರು ಬಂದಿದೆ.

ಬಸದಿ ಬೆಟ್ಟ ಮಂದರಗಿರಿಯ ದೂರಗಳು

  • ಬೆಂಗಳೂರು – 62 ಕಿ.ಮೀ
  • ತುಮಕೂರು – 15 ಕಿ.ಮೀ
  • ಹಿರೇಹಳ್ಳಿ ರೈಲ್ವೆ ನಿಲ್ದಾಣ – 5 ಕಿ.ಮೀ
  • ತುಮಕೂರು ರೈಲ್ವೆ ನಿಲ್ದಾಣ – 14 ಕಿ.ಮೀ

ಮಂದರಗಿರಿ (ಬಸದಿ ಬೆಟ್ಟ)ದಲ್ಲಿರುವ ನಾಲ್ಕು ಬಸದಿಗಳಲ್ಲಿ ಎರಡು ಬಸದಿಗಳು ಜೈನ ತೀರ್ಥಂಕರರಾದ ಚಂದ್ರನಾಥರ ಬಸದಿಗಳಾಗಿದ್ದು, ಒಂದು ಕೃಪಾಶ್ವನಾಥರ ಪುರಾತನ ಬಸದಿ ಮತ್ತು ಇನ್ನೊಂದು ಪಾರ್ಶ್ವನಾಥರ ಬಸದಿ ಆಗಿದೆ. ಈ ಬಸದಿಗಳೆಲ್ಲವೂ ಸಂಪೂರ್ಣವಾಗಿ ಶಿಲೆಯಲ್ಲಿ ನಿರ್ಮಿಸಲ್ಪಟ್ಟಿವೆ. ಇವುಗಳಿಗೆ ಸುಮಾರು ಸಾವಿರ ವರ್ಷಗಳ ಇತಿಹಾಸವಿದೆ.

ಇಲ್ಲಿನ ಕಲ್ಲಿನ ಹಾಸಿನ ಮೇಲೆ ಬೃಹದಾಕಾರದ ಪಾದಚಿಹ್ನೆಯ ಕೆತ್ತನೆ ಕಂಡುಬರುತ್ತದೆ. ಇದನ್ನು “ಭೀಮಪಾದ” ಎಂದು ಕರೆಯುತ್ತಾರೆ. ಈ ನಾಲ್ಕೂ ಬಸದಿ ಮಂದಿರಗಳಲ್ಲಿ ಒಂದು ವಿಶೇಷತೆ ಇದೆ—ಯಾವ ಬಸದಿಗೂ ಬಾಗಿಲುಗಳಿಲ್ಲ. ಎಲ್ಲವನ್ನೂ ತೊರೆದು ವೈರಾಗ್ಯಮೂರ್ತಿಯಾದ ಬಾಹುಬಲಿಯ ಅನುಯಾಯಿಗಳಾದ ತೀರ್ಥಂಕರರ ಆರಾಧನಾ ಸ್ಥಳಗಳಲ್ಲಿ ಕದ್ದೊಯ್ಯುವಂಥದೇನೂ ಇಲ್ಲ; ಎಲ್ಲವನ್ನೂ ತೊರೆದವರಿಗೆ ಬಾಗಿಲುಗಳ ಬಂಧನವೇನು ಎಂಬ ಸಂದೇಶವನ್ನು ಇದು ಸಾರುತ್ತದೆ. ಬೆಟ್ಟದ ಮೇಲೆ ಶಿಲಾಶಾಸನಗಳೂ ಕಂಡುಬರುತ್ತವೆ.

ಈ ಬೆಟ್ಟದ ಮತ್ತೊಂದು ವಿಶೇಷತೆ “ಗುರುಮಂದಿರ”ವಾಗಿದೆ. ಈ ಗುರುಮಂದಿರವು ಸುಮಾರು 81 ಅಡಿ ಎತ್ತರದಲ್ಲಿ ಪಿಂಚಿ ಆಕಾರದಲ್ಲಿ ನಿರ್ಮಿತವಾಗಿದೆ. “ಪಿಂಚಿ” ಎಂದರೆ ನವಿಲಿನ ಗರಿಗಳಿಂದ ಮಾಡಿದ ಮುಚ್ಚಲಿಕ್ಕೆ (ಪಂಖ) ಎಂದು ಅರ್ಥ. ಈ ಪ್ರಪಂಚದಲ್ಲೇ ಪಿಂಚಿ ಆಕಾರದ ಮಂದಿರವಾಗಿ ಮಂದರಗಿರಿ ಪ್ರಸಿದ್ಧಿ ಪಡೆದಿದೆ.

ಭೇಟಿ ನೀಡಿ
ತುಮಕೂರು ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section