ಮಧುಗಿರಿ ಕೋಟೆಯು ಕರ್ನಾಟಕ ರಾಜ್ಯದ ತುಮಕೂರಿನ ಮಧುಗಿರಿ ತಾಲ್ಲೂಕಿನಲ್ಲಿದೆ. ಈ ಕೋಟೆಯ ಬೆಟ್ಟವು ಏಷ್ಯಾದ ಎರಡನೇ ಅತಿದೊಡ್ಡ ಏಕಶಿಲಾಬೆಟ್ಟವಾಗಿದೆ. ಇದು ಸಮುದ್ರ ಮಟ್ಟದಿಂದ 3958 ಅಡಿ (1192 ಮೀಟರ್)ಗಳಷ್ಟು ಎತ್ತರವಿದೆ.
ಈ ಕೋಟೆಯು ಬೆಂಗಳೂರಿನಿಂದ 112 ಕಿ.ಮೀ ಮತ್ತು ತುಮಕೂರು ನಗರದಿಂದ 48 ಕಿ.ಮೀ ದೂರದಲ್ಲಿದೆ. ಹಾಗು ಮಧುಗಿರಿ ನಗರದಿಂದ ಕೇವಲ 03 ಕಿ.ಮೀ ದೂರದಲ್ಲಿದೆ.
ವಿಜಯನಗರದ ಅರಸ ಹರಿಧರನ ಶಾಸನದಲ್ಲಿ ಈ ಊರನ್ನು ಮದಗಿರಿ ಹಳ್ಳಿ ಎಂದು ಉಲ್ಲೇಖ ಮಾಡಲಾಗಿದೆ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಇಲ್ಲಿಯ ಉಪ ವಿಭಾಗ ಅಧಿಕಾರಿಯಾಗಿದ್ದಾಗ ಈ ಊರನ್ನು ಮಧುಗಿರಿ ಎಂದು ಬದಲಾಯಿಸಲಾಯಿತು.
ಆ ನಾಡ ಪ್ರಭುಗಳು ಎಂಬ ಇತಿಹಾಸದ ಮನೆತನ ಇಲ್ಲಿ ಆಳ್ವಿಕೆ ನೆಡೆಸುತ್ತ ಇದ್ದ ಕಾಲ. ಅದರಲ್ಲಿ ಚಿಕ್ಕಪ್ಪ ಗೌಡ ಎಂಬ ಪಾಳೇಗಾರ ಕ್ರಿಸ್ತಶಕ 1609ರಲ್ಲಿ ಈ ಕೋಟೆಯನ್ನು ಕಟ್ಟಿಸಲು ಪ್ರಾರಂಭಿಸಿದನು. ನಂತರ 18 ನೇ ಶತಮಾನದಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕೋಟೆಯನ್ನು ಭದ್ರಪಡಿಸಿದರು. ಇದು ಮೈಸೂರು ಅರಸರಿಗೆ ಪ್ರಮುಖ ಭದ್ರಕೋಟೆಯಾಗಿತ್ತು ಮತ್ತು 1791 ರಲ್ಲಿ ಆಂಗ್ಲೋ-ಮೈಸೂರು ಯುದ್ಧಗಳ ಸಮಯದಲ್ಲಿ ಬ್ರಿಟಿಷರಿಂದ ವಶಪಡಿಸಿಕೊಳ್ಳಲಾಯಿತು.
ಬೆಟ್ಟದ ತಳದಲ್ಲಿ ನಾಲ್ಕು ಗುಹೆಗಳಿವೆ. ಭೀಮನ ದೊಣೆ, ನವಿಲು ದೊಣೆ ಎಂಬ ಎರಡು ಕೆರೆಗಳೂ ಇವೆ. ಮಧುಗಿರಿ ಬೆಟ್ಟದ ತುತ್ತತುದಿಯಲ್ಲಿ ಹಿಂದೆ ಇತ್ತೆಂದು ಹೇಳಲಾಗುವ ಗೋಪಾಲಕೃಷ್ಣ ದೇವಾಲಯ ಈಗ ಪಾಳುಬಿದ್ದಿದೆ.
ಗೋಡೆಗಳು ತುಂಬಾ ಕಡಿದಾದವು, ಶತ್ರುಗಳಿಗೆ ಅವುಗಳನ್ನು ಏರಲು ಅಸಾಧ್ಯವಾಗಿದೆ. ಕೋಟೆಯ ಅತ್ಯಂತ ಆಸಕ್ತಿದಾಯಕ ವೈಶಿಷ್ಟ್ಯವೆಂದರೆ ಅದರ ಬೃಹತ್ ಪ್ರವೇಶದ್ವಾರ, ಇದನ್ನು ‘ದಿಡ್ಡಿಬಾಗಿಲು’ ಎಂದು ಕರೆಯಲಾಗುತ್ತದೆ. ಪ್ರವೇಶದ್ವಾರವು ಸುಮಾರು 25 ಅಡಿ ಎತ್ತರ ಮತ್ತು 17 ಅಡಿ ಅಗಲವಿದೆ ಮತ್ತು ಕೋಣೆಗಳ ಸರಣಿಯನ್ನು ಹೊಂದಿದೆ. ಹಲವಾರು ನೀರಿನ ತೊಟ್ಟಿಗಳನ್ನು ಮತ್ತು ಗೋಪಾಲಕೃಷ್ಣ ದೇವರಿಗೆ ಸಮರ್ಪಿತವಾದ ದೇವಾಲಯವನ್ನು ಹೊಂದಿದೆ.
ಭೇಟಿ ನೀಡಿ