ರಾಮನಗರದ ರಾಮದೇವರ ಬೆಟ್ಟ ರಣಹದ್ದು ಅಭಯಾರಣ್ಯ (ಅಥವಾ ಬೆಟ್ಟ)ವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನಲ್ಲಿ ಇರುವ ಒಂದು ಪ್ರಸಿದ್ಧ ಬೆಟ್ಟವಾಗಿದೆ. ಈ ಪ್ರದೇಶವನ್ನು ಏಷ್ಯಾದ ಅತಿ ಹೆಚ್ಚು ರಣಹದ್ದುಗಳಿರುವ ಪ್ರದೇಶ ಎಂದು ಕರೆಯುತ್ತಾರೆ. ರಾಮದೇವರ ಬೆಟ್ಟವನ್ನು ‘ದಕ್ಷಿಣದ ಚಿತ್ರಕೂಟ’ ಎಂದೇ ಪ್ರಸಿದ್ಧಿಯಾಗಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 1000 ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿದೆ.
ಈ ಬೆಟ್ಟವು ಬೆಂಗಳೂರಿನಿಂದ 45 ಕಿ.ಮೀ ಮತ್ತು ರಾಮನಗರದಿಂದ ಕೇವಲ 6 ಕಿ.ಮೀ ದೂರದಲ್ಲಿದೆ. ಹಾಗೂ ರಾಮನಗರ ರೈಲ್ವೆ ನಿಲ್ದಾಣದಿಂದಲೂ 6 ಕಿ.ಮೀ ದೂರದಲ್ಲಿದೆ.
ಈ ಬೆಟ್ಟಕ್ಕೆ ಚಾರಣ ಮಾಡಲು ಪ್ರವೇಶ ಶುಲ್ಕ ಮತ್ತು ಪಾರ್ಕಿಂಗ್ ಶುಲ್ಕ ಇರುತ್ತದೆ. ಪ್ರವೇಶ ಶುಲ್ಕವು ಪ್ರತಿ ವ್ಯಕ್ತಿಗೆ ರೂ. 25/- ಇರುತ್ತದೆ. ಇಲ್ಲಿ ರಣಹದ್ದುಗಳ ಬಗ್ಗೆ ಮಾಹಿತಿ ನೀಡುವ ಮಾಹಿತಿ ಕೇಂದ್ರವೂ ಇದೆ.
ರಾಮದೇವರ ಬೆಟ್ಟದ ಪ್ರಾರಂಭದಲ್ಲಿ ಆಂಜನೇಯನ ಉದ್ಭವ ಮೂರ್ತಿಯನ್ನು ಕಾಣಬಹುದು. ಬೆಟ್ಟದ ಮೇಲೆ ರಾಮೇಶ್ವರ ಮತ್ತು ಪಟ್ಟಾಭಿರಾಮ ದೇವಾಲಯಗಳೂ ಇವೆ.
ಇತಿಹಾಸ
ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸದ ಸಮಯದಲ್ಲಿ ಇಲ್ಲಿ ನೆಲೆಸಿದ್ದರಂತೆ. ಆಗ ಇಲ್ಲಿ ಕಾಕಾಸುರ ಎಂಬ ರಾಕ್ಷಸ ತೊಂದರೆ ಕೊಡುತ್ತಿದ್ದನಂತೆ. ಇದರಿಂದ ಕೋಪಗೊಂಡ ಶ್ರೀರಾಮನು ಕಾಕಾಸುರನ ಕಣ್ಣನ್ನು ಬಾಣದಿಂದ ಹೊಡೆದು ಕಿತ್ತುಹಾಕುತ್ತಾನೆ ಮತ್ತು ಅವನಿಗೆ ಶಾಪ ನೀಡುತ್ತಾನೆ. ಅಂದಿನಿಂದ ಈ ಬೆಟ್ಟದಲ್ಲಿ ಒಂದು ಕಾಗೆಯೂ ಸಿಗುವುದಿಲ್ಲ ಎಂದು ಹೇಳುತ್ತಾರೆ.
ಬೆಟ್ಟದ ಮೇಲೆ ರಾಮೇಶ್ವರ ಮತ್ತು ಪಟ್ಟಾಭಿರಾಮ ದೇವಾಲಯವಿದ್ದು, ದೇಗುಲದ ಮುಂಭಾಗದಲ್ಲಿ ಬೃಹದಾಕಾರದಲ್ಲಿ ನಿಂತಿರುವ ರೀತಿಯಲ್ಲಿ ಏಳು ಬಂಡೆಗಳಿವೆ. ಸಪ್ತ ಋಷಿಗಳು ಸೀತೆಗಾಗಿ ಕಟ್ಟಿಸಿದಂತೆಯೆಂದು ಹೇಳಲಾಗುವ ಕೊಳದಲ್ಲಿ ಸ್ನಾನ ಮಾಡಿ, ಅಲ್ಲಿ ತಪಸ್ಸು ಮಾಡಿ, ಅಲ್ಲೇ ಕಲ್ಲಾದರಂತೆ ಎಂಬ ಸ್ಥಳಪುರಾಣವಿದೆ.
ಪಟ್ಟಾಭಿರಾಮ ದೇವಾಲಯಕ್ಕೆ ಈ ಹೆಸರು ಬರಲು ಒಂದು ಕಾರಣ ಇದೆ. ಪಟ್ಟಾಭಿಷೇಕವಾದ ರಾಮನ ಮೂರ್ತಿಯನ್ನು ಪ್ರತಿಷ್ಠಾಪನೆಗಾಗಿ ತೆಗೆದುಕೊಂಡು ಹೋಗುವಾಗ, ಆ ಸಮಯದಲ್ಲಿ ಸುಖಾಸುರ ಎಂಬ ರಾಕ್ಷಸನೊಬ್ಬ ದಾಳಿ ಮಾಡುತ್ತಾನೆ. ಮೂರ್ತಿಯನ್ನು ಅಲ್ಲೇ ಇಟ್ಟು ಅವನನ್ನು ಸೋಲಿಸಿ, ಮೂರ್ತಿಯನ್ನು ಎತ್ತಲು ಹೋದಾಗ ಆ ಮೂರ್ತಿಯು ಅಲ್ಲಿಂದ ಎದ್ದೇಳುವುದಿಲ್ಲ. ಆಗ ಆಕಾಶವಾಣಿಯೊಂದು — “ಈ ಸ್ಥಳವು ನನಗೆ ಪ್ರಶಸ್ತವಾಗಿದೆ, ನಾನು ಇಲ್ಲೇ ನೆಲೆಸುವೆ” — ಎಂದು ಕೇಳಿಸುತ್ತದೆ. ನಂತರ ಆ ಮೂರ್ತಿಯನ್ನು ಇಲ್ಲೇ ಪ್ರತಿಷ್ಠಾಪಿಸಲಾಗುತ್ತದೆ. ಇಲ್ಲಿರುವ ಮೂರ್ತಿಯನ್ನು ಒಂದೇ ಶಿಲೆಯಲ್ಲಿ ಕೆತ್ತಲಾಗಿದೆ.
ವನವಾಸದ ಸಂದರ್ಭದಲ್ಲಿ ಸೀತೆಗೆ ನೀರು ಬೇಕೆಂದು ಹೇಳಿದಾಗ, ರಾಮನು ಬಾಣ ಹೂಡಿ ಒಂದು ಕೊಳವನ್ನು ನಿರ್ಮಿಸುತ್ತಾನೆ. ಆ ಕೊಳವೂ ಇಲ್ಲೇ ಇದೆ. ಈ ಕೊಳದ ಆಳವನ್ನು ಇಂದಿನವರೆಗೂ ಯಾರಿಗೂ ತಿಳಿದಿಲ್ಲ, ಮತ್ತು ಯಾವುದೇ ಬೇಸಿಗೆ ಕಾಲದಲ್ಲೂ ಈ ಕೊಳ ಬತ್ತುವುದಿಲ್ಲ.
ಭೇಟಿ ನೀಡಿ




