ಅಕ್ಕ ನಾಗಮ್ಮ ಗವಿ

ಅಕ್ಕನಾಗಮ್ಮ ಗವಿಯು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮೊರ್ಖಂಡಿ ಗ್ರಾಮದಲ್ಲಿ ಇದೆ. 12ನೇ ಶತಮಾನದ ಕನ್ನಡ ನಾಡಿನ ಶಿವಶರಣೆಯರಲ್ಲಿ ಅಗ್ರಗಣ್ಯ ಶರಣೆಯಾದ ಅಕ್ಕನಾಗಮ್ಮನಿಗೆ ಸಮರ್ಪಿತವಾದ ಗವಿಯಾಗಿದೆ. ಶಿವಶರಣೆ ಅಕ್ಕನಾಗಮ್ಮ ಬಸವಾದಿ ಶರಣರ ಸಾಕ್ಷಿ ಪ್ರಜ್ಞೆಯಾಗಿದ್ದು, ಇಡೀ ಶರಣ ಸಂಕುಲ ಮತ್ತು ವಚನ ಸಾಹಿತ್ಯ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಧೀರ ಮಹಿಳೆಯಾಗಿದ್ದಳು.

ಈ ಸ್ಥಳವು ಬೆಂಗಳೂರಿನಿಂದ 714 ಕಿ.ಮೀ (NH50 ಮೂಲಕ), 727 ಕಿ.ಮೀ (NH44 – ಹೈದರಾಬಾದ್ ಮೂಲಕ), ಬೀದರ್‌ನಿಂದ 79 ಕಿ.ಮೀ ಮತ್ತು ಬಸವಕಲ್ಯಾಣದಿಂದ 3 ಕಿ.ಮೀ ದೂರದಲ್ಲಿದೆ.

ಇದು ಎರಡನೇ ಅತಿದೊಡ್ಡ ಗವಿ. ಸುಮಾರು ನೂರು ಅಡಿ ಉದ್ದವಿರುವ ಈ ಗವಿಯು ದಾಸೋಹದ ಮನೆಯು ಕೂಡ ಆಗಿತ್ತು. ಅಕ್ಕನಾಗಮ್ಮ ಬಸವಣ್ಣನವರ ಸಹೋದರಿ ಮತ್ತು 12ನೇ ಶತಮಾನದ ಕನ್ನಡ ನಾಡಿನ ಶಿವಶರಣೆಯರಲ್ಲಿ ಅಗ್ರಗಣ್ಯಳು. ಶಾಂತವಾದ ಮಹಿಳಾ ಆಧ್ಯಾತ್ಮಿಕಭೂಮಿ, ತ್ಯಾಗದ ತವರು, ಯೋಗದ ಜಗುಲಿ ಮತ್ತು ಶಿವಯೋಗದ ಮೂರ್ತಿರೂಪವೇ ಅಕ್ಕನಾಗಮ್ಮ. ಬಸವೇಶ್ವರರು ಕೈಗೊಂಡ ಎಲ್ಲಾ ಚಟುವಟಿಕೆಗಳಲ್ಲಿ ಈಕೆ ಬೆಂಬಲಿಯಾಗಿದ್ದರು. ಕರ್ನಾಟಕದ ಶಿವಶರಣರು ಈಕೆಯ ಬಗ್ಗೆ ಹೆಚ್ಚಿನ ಭಕ್ತಿಗೌರವ ತಾಳುತ್ತಾರೆ. ಚೆನ್ನಬಸವಪುರಾಣ, ಪುರಾತನ ದೇವಿಯರ ತ್ರಿಪದಿ, ಬಸವಪುರಾಣ ಗ್ರಂಥಗಳಲ್ಲಿ ಈಕೆಯ ಹೆಸರು ನಿರೂಪಿತವಾಗಿದೆ.

ಬಾಗೇವಾಡಿ ಈಕೆಯ ಜನ್ಮಸ್ಥಳ. ತಂದೆ ಮಾದರಸ ಮತ್ತು ತಾಯಿ ಮಾದಲಾಂಬಿಕೆ. ಮಗ ಚನ್ನಬಸವೇಶ್ವರ, ಸಹೋದರ ಬಸವೇಶ್ವರ, ಗುರು ಕಪ್ಪಡಿ ಸಂಗಮದ ಜಾತವೇದಸ್ವಾಮಿ. ಮಹಾಯೋಗಿನಿಯಾದ ಈಕೆಯ ಸ್ಮಾರಕಗಳು ಬಿಜಾಪುರ ಜಿಲ್ಲೆಯ ಇಂಗಳೇಶ್ವರ, ಬೀದರ್ ಜಿಲ್ಲೆಯ ಕಲ್ಯಾಣ, ಉತ್ತರಕನ್ನಡ ಜಿಲ್ಲೆಯ ಉಳವಿಯಲ್ಲಿವೆ.

ಭೇಟಿ ನೀಡಿ
ಬಸವಕಲ್ಯಾಣ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section